ಸಕಲೇಶಪುರ ತಾಲೂಕಿನ ಹಲಸುಲಿನ ಗ್ರಾಮದಲ್ಲಿ ಹಾಡ ಹಗಲೇ ಕಾಡಾನೆಯೊಂದು ಸಂಚರಿಸಿ ಜನರಲ್ಲಿ ಆತಂಕ ಹುಟ್ಟುಹಾಕಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಗ್ರಾಮದ ಪಾಪಣ್ಣ ಎಂಬುವರ ಮನೆ ಮುಂದೆ ಆಗಮಿಸಿ ಕೆಲ ಕಾಲ ನಿಂತು ಹಲಸುಲಿಗೆ ಮುಖ್ಯ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಿದೆ. ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ.
ಕೆಲದಿನಗಳ ಹಿಂದಷ್ಟೇ ಬೇಲೂರು ತಾಲೂಕಿನ ಕಡೆಗರ್ಜೆಯಲ್ಲಿ ಕಾಡಾನೆಯೊಂದು ಇಬ್ಬರು ಕೂಲಿ ಕಾರ್ಮಿಕರನ್ನು ಬಲಿಪಡೆದುಕೊಂಡಿತ್ತು. ಈ ಘಟನೆ ನಡೆಯುವ ಮೊದಲೇ ಕಾಡಾನೆಗಳು ಸಕಲೇಶಪುರ, ಬೇಲೂರು, ಆಲೂರು ತಾಲೂಕಿನ ಕೆಲವೆಡೆ ತಿರುಗಾಡುತ್ತಿವೆ.
ಕಾಡಾನೆ ಹಾವಳಿ ತಾಲೂಕಿನಲ್ಲಿ ಮಿತಿ ಮೀರಿದ್ದು, ಅಡು ಹಗಲೆ ಕಾಡಾನೆಗಳು ಗ್ರಾಮಗಳಿಗೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹುಟ್ಟು ಹಾಕುತ್ತಿದೆ.ಕಾಡಾನೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡು ಹಿಡಿಯಲು ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.