ಕೆಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯದ್ದೇ ಸುದ್ದಿ.
ಈ ಬಹುಚರ್ಚಿತ ಮದುವೆಯ ತಯಾರಿ ಕೂಡ ಭರ್ಜರಿಯಾಗೇ ಸಾಗಿತ್ತು. ಆದರೆ ಇದೀಗ ಮದುವೆಯ ಸಮಾರಂಭಕ್ಕೆ ಸದ್ಯದ ಮಟ್ಟಿಗೆ ಬ್ರೇಕ್ ಬಿದ್ದಿರುವ ಸುದ್ದಿ ಬಂದಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕಪೂರ್ ಮನೆತನದ ಮುದ್ದಿನ ಮಗ ರಣಬೀರ್ ಕಪೂರ್ ಮತ್ತು ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರ ಮಗಳು, ಬಾಲಿವುಟ್ ಸ್ಟಾರ್ ನಾಯಕಿಯರಲ್ಲಿ ಒಬ್ಬರಾದ ಆಲಿಯಾ ಭಟ್ ಅವರ ವಿವಾಹ ಏಪ್ರಿಲ್ 14 ರಂದು ನಡೆಯಬೇಕಿತ್ತು.
ಅಂದು ಈ ಮದುವೆ ನಡೆಯುತ್ತಿಲ್ಲವಂತೆ, ಮದುವೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ ಎನ್ನುತ್ತಿದ್ದಾರೆ ವಧುವರರ ಕುಟುಂಬದವರು. ಆದರೆ, ಮದುವೆ ಯಾವ ದಿನ ನಡೆಯಲಿದೆ ಎಂಬ ಖಚಿತ ಮಾಹಿತಿಯನ್ನು ಕೂಡ ಅವರು ನೀಡುತ್ತಿಲ್ಲ.
ಆಲಿಯಾ ಮತ್ತು ರಣಬೀರ್ ಮದುವೆ ಏಪ್ರಿಲ್ 14 ರಂದು ನಡೆಯುತ್ತಿಲ್ಲ ಮತ್ತು ಏಪ್ರಿಲ್ 13 ರಂದು ಕೂಡ ಯಾವುದೇ ಸಮಾರಂಭ ಇರುವುದಿಲ್ಲ ಎಂದು ಆಲಿಯಾ ಮಲ ಸಹೋದರ ರಾಹುಲ್ ಭಟ್ ಮಂಗಳವಾರ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಈ ಮೊದಲು ಆಲಿಯಾ ಭಟ್ ಅವರ ಅಂಕಲ್ , ರೋಬಿನ್ ಭಟ್ ಅವರು, ಏಪ್ರಿಲ್ 13 ರಂದು ಮೆಹಂದಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಸುಂದರವಾಗಿ ಅಲಂಕೃತಗೊಂಡಿದ್ದ ಮನೆ
ಆಲಿಯಾ ಮತ್ತು ರಣಬೀರ್ ಮದುವೆ, ಚೆಂಬೂರ್ ನಲ್ಲಿರುವ ಕಪೂರ್ ಮನೆತನದ ನಿವಾಸದಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಕಳೆದ ಕೆಲವು ದಿನಗಳಿಂದ ಆ ಮನೆ ಸುಂದರವಾಗಿ ಅಲಂಕೃತಗೊಂಡಿತ್ತು ಮತ್ತು ಅಲ್ಲಿ ಸಮಾರಂಭದ ತಯಾರಿ ಭರದಿಂದ ನಡೆಯುತ್ತಿತ್ತು ಹಾಗೂ ಭದ್ರತಾ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಅವರಿಬ್ಬರ ಮದುವೆಯನ್ನು ತೀರಾ ಖಾಸಗಿಯಾಗಿ ನಡೆಸಬೇಕೆಂದು ಕುಟುಂಬದವರು ನಿರ್ಧರಿಸಿದ್ದರು.
“ಈ ಮದುವೆ ನಡೆಯುತ್ತಿದೆ ಮತ್ತು ಇದು ಎಲ್ಲರಿಗೂ ಗೊತ್ತಾಗಿದೆ. ಆದರೆ ಏಪ್ರಿಲ್ 13 ಮತ್ತು 14 ರಂದು ಮದುವೆ ನಡೆಯುವುದಿಲ್ಲ. ಅದಂತೂ ಖಂಡಿತಾ. ನಿಜ ಹೇಳಬೇಕೆಂದರೆ, ಈ ಮೊದಲು ತಿಳಿಸಿದ ದಿನವೇ ಮದುವೆ ನಡೆಯಬೇಕಿತ್ತು. ಆದರೆ, ಅದರ ಮಾಹಿತಿ ಮಾಧ್ಯಮಗಳಲ್ಲಿ ಪ್ರಚಾರವಾಯಿತು ಎಂಬ ಕಾರಣಕ್ಕೆ ದಿನಾಂಕವನ್ನು ಬದಲಾಯಿಸಲಾಗಿದೆ.
ತುಂಬಾ ಒತ್ತಡವಿದ್ದ ಕಾರಣಕ್ಕಾಗಿ ಎಲ್ಲವನ್ನು ಬದಲಾಯಿಸಲಾಗಿದೆ. ಏಪ್ರಿಲ್ 13 ಮತ್ತು ಏಪ್ರಿಲ್ 14 ರಂದು ಮದುವೆ ಇರುವುದಿಲ್ಲ ಎಂಬುದನ್ನು ನಾನು ಖಚಿತವಾಗಿ ಹೇಳುತ್ತೇನೆ. ನನಗೆ ತಿಳಿದಿರುವ ಪ್ರಕಾರ, ಮದುವೆಯ ದಿನಾಂಕವನ್ನು ಸದ್ಯದಲ್ಲೇ ಘೋಷಣೆ ಮಾಡಲಾಗುವುದು” ಎಂದು ರಾಹುಲ್ ಭಟ್ ತಿಳಿಸಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada