ಅಂಧ್ರದ ಗಡಿಭಾಗ, ಜಿಲ್ಲಾ ಕೇಂದ್ರದಿಂದ 60 ಕಿಲೋ ಮೀಟರ್ ಹಾಗೂ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಕೆಟ್ಟು 4 ತಿಂಗಳಾದರೂ ದುರಸ್ತಿಯಾಗಿಲ್ಲ. ಇದರಿಂದಾಗಿ ಇಲ್ಲಿನ ರೋಗಿಗಳ ಗೋಳು ಕೇಳುವವರು ಇಲ್ಲದಂತಾಗಿದೆ.
ಜಿಲ್ಲೆಯಲ್ಲಿಯೇ ಅತಿ ದೊಡ್ಡ ಹೋಬಳಿ ಕೇಂದ್ರವಾದ ಇಲ್ಲಿಗೆ ಪ್ರತಿದಿನ ಒಂದಲ್ಲ ಒಂದು ತುರ್ತು ಚಿಕಿತ್ಸೆಗೆ ಬರುವ ರೋಗಿಗಳು ಇದ್ದೇ ಇರುತ್ತಾರೆ. ಆದರೆ ತುರ್ತು ಚಿಕಿತ್ಸೆಗೆ ಸಾಗಿಸಲು ಬೇಕಾದ ಆಂಬುಲೆನ್ಸ್ ಇಲ್ಲ. ಆಸ್ಪತ್ರೆಯಲ್ಲಿ ಕೇಳಿದರೆ, ‘ಇನ್ನೂ ರಿಪೇರಿ ಮಾಡಿಸಿಲ್ಲ. ಇಂದು ಇಲ್ಲವೇ ನಾಳೆ ದುರಸ್ತಿಯಾಗುತ್ತದೆ’ ಎಂದು ಸಬೂಬು ಹೇಳುತ್ತಾರೆ.
‘ತಾಲ್ಲೂಕು ಆಡಳಿತ ವೈದ್ಯಾಧಿಕಾರಿಯಂತೂ ದೂರವಾಣಿ ಕರೆಗಳನ್ನೇ ಸ್ವೀಕರಿಸುವುದಿಲ್ಲ’ ಎಂದು ರೋಗಿಗಳು ಹಾಗೂ ಸಂಬಂಧಿಕರು ದೂರುತ್ತಾರೆ.
‘ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತೊಂದು ಆಂಬುಲೆನ್ಸ್ 108 ಸೇವೆಯೂ ಇದೆ. ಆದರೆ ಅದಕ್ಕೆ ಸಿಬ್ಬಂದಿ ಕೊರತೆ ಇದೆ. ವಾರದಲ್ಲಿ ನಾಲ್ಕು ದಿನ ಸೇವೆ ನೀಡಿದರೆ ವಾರಾಂತ್ಯ ರಜೆ ಹಾಕುತ್ತಾರೆ. ವಾಹನ ಚಾಲಕರನ್ನು ಈ ಬಗ್ಗೆ ವಿಚಾರಿಸಿದರೆ ಸಿಬ್ಬಂದಿ ಕೊರತೆ ಇದೆಯೆನ್ನುತ್ತಾರೆ’ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಚನ್ನಕೇಶವ, ನಿಜಲಿಂಗಪ್ಪ, ತಿಮ್ಮಣ್ಣ, ಓಬಳೇಶ, ನಟರಾಜ ದೂರಿದರು.
ಒಂದು ಆಂಬುಲೆನ್ಸ್ ದುರಸ್ತಿಯಾಗಿಲ್ಲ. ಮತ್ತೊಂದು ಆಂಬುಲೆನ್ಸ್ಗೆ ಸಿಬ್ಬಂದಿ ಕೊರತೆ. ಇದರಿಂದಾಗಿ ಇಲ್ಲಿಯ ರೋಗಿಗಳ ಸ್ಥಿತಿ ಆಂಬುಲೆನ್ಸ್ ಇಲ್ಲದೇ ‘ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು’ ಎಂಬಂತಾಗಿದೆ’ ಎನ್ನುತ್ತಾರೆ ಅವರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada