ಕರ್ನಾಟಕ ರತ್ನ ದಿ.ಪುನೀತ್ ರಾಜ್ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.ಮಂಗಳವಾರ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಘಟಿಕೋತ್ಸವ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪುನೀತ್ ರಾಜ್ಕುಮಾರ್ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು. ಎಲ್ ಇಡಿ ಸ್ಕ್ರೀನ್ ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿದ ಹಲವು ಚಿತ್ರಗಳ ತುಣುಕು ಪ್ರದರ್ಶಿಸಲಾಯಿತು. ಪುನೀತ್ ರಾಜ್ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ವೇಳೆ ಅವರು ಕೆಲಕಾಲ ಭಾವುಕಗೊಂಡರು. ಈ ಹಿಂದೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು 46 ವರ್ಷಗಳ ಹಿಂದೆ ಮೈಸೂರು ವಿವಿ ನೀಡಿತ್ತು ಎಂಬುದು ಸ್ಮರಣೀಯ.