ಮುಖ್ಯಮಂತ್ರಿಯಾಗಿದ್ದವನೊಬ್ಬ ಮುಂದಿನ ವಿಧಾನಸಭಾ ಚುನಾವಣೆಗಾಗಿ ಕ್ಷೇತ್ರ ಹುಡುಕುತ್ತಿದ್ದಾನೆ. ಇದು ಕುರುಬ ಸಮಾಜಕ್ಕೆ ನಾಚಿಕೆಯಾಗುವಂತಹದ್ದು. ಎಲ್ಲೂ ಬೇಡ ಹುಣಸೂರಿಗೆ ಬಾರಪ್ಪ. ನೀನು ಹುಣಸೂರಿಗೆ ಬಂದು ನನ್ನನ್ನು ಸೋಲಿಸಿದ್ದೆ.
ಅದೇ ಕ್ಷೇತ್ರದಲ್ಲಿ ನಿನ್ನನ್ನು ನಾವೆಲ್ಲಾ ಗೆಲ್ಲಿಸುತ್ತೇವೆ ಎಂದು ವಿಧಾನಪರಿಷತ್ನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿಯ ನಿಯಮಬಾಹಿರ ಕಾರ್ಯವೈಖರಿ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮಗೆ ವಿಶಾಲ ಮನೋಭಾವವಿದೆ. ಸಮಾಜದ ಹಿತಕ್ಕಾಗಿ ತ್ಯಾಗಕ್ಕೆ ಸಿದ್ಧವಿದ್ದೇವೆ. ಈಗ ಮಠದ ಸ್ಥಿತಿ ಏನಾಗಿದೆ. ಮಠಕ್ಕಾಗಿ ಎಲ್ಲಾ ತ್ಯಾಗಗಳನ್ನೂ ಮಾಡಿದ್ದೆ. ಮೂರು ವರ್ಷ ಹೆಂಡತಿ–ಮಕ್ಕಳು, ಕ್ಷೇತ್ರ ಬಿಟ್ಟು ಸುತ್ತಾಡಿದ್ದೆ. ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ನನ್ನನ್ನೇ ಬಿಟ್ಟು ಬೆಳ್ಳಿ ಹಬ್ಬ ಆಚರಣೆ ಮಾಡಿಸಿದ. ಇದಕ್ಕಿಂತ ಅನ್ಯಾಯ ಬೇಕೇ. ನಿಮಗೆ ನಾಚಿಕೆ ಆಗುವುದಿಲ್ಲವೇ‘ ಎಂದು ಹರಿಹಾಯ್ದರು.
ಸಮಾಜದ ಬೆಳವಣಿಗೆಗೆ ಸಿದ್ದರಾಮಯ್ಯ ಮಾರಕ ಆಗಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಮಾಡಿದ ಕೆಲಸಗಳಿಗೆ ಸಿದ್ದರಾಮಯ್ಯ ಸ್ಪಂದಿಸಲೇ ಇಲ್ಲ. ಮಾಜಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಸಮಾಜದ ಬೆಳವಣಿಗೆಗೆ ಸಹಕಾರ ಕೊಡ್ತಾನೆ ಇಲ್ಲ ಎಂದರು.
ಕುರುಬರಿಗೆ ಇದ್ದ ಎಲ್ಲ ಕ್ಷೇತ್ರಗಳು ಈಗ ದೂರ ಆಗ್ತಿದೆ. ವಿಧಾನಸಭೆಯಲ್ಲಿ ಕುರುಬರಿಗೆ ಕ್ಷೇತ್ರ ಇಲ್ಲದಂತಾಗಿದೆ. ಬಾದಾಮಿಗೆ ಹೋಗಿ ಸಿದ್ದರಾಮಯ್ಯ ಹಿರಿಯ ನಾಯಕ ಚಿಮ್ಮನಕಟ್ಟಿಗೆ ಅನ್ಯಾಯ ಮಾಡಿದರು. 1700 ಮತದಲ್ಲಿ ಗೆದ್ದು ಬಂದು ಚಿಮ್ಮನಕಟ್ಟಿ ಕೈಬಿಟ್ಟರು. ಎಚ್ಎಂ ರೇವಣ್ಣನಿಗೆ ಈಗ ಕ್ಷೇತ್ರ ಇಲ್ಲದ ಹಾಗೆ ಮಾಡಿದರು ಎಂದು ಆರೋಪಿಸಿದರು.
ನವಲಗುಂದದಲ್ಲಿ ಕೋನರೆಡ್ಡಿ ಸೇರಿಸಿಕೊಂಡು ಕುರುಬರಿಗೆ ಅಲ್ಲಿ ಅನ್ಯಾಯ ಮಾಡಿದರು. ಹುಣಸೂರು ಮತ್ತು ಕೆಆರ್ ನಗರದಲ್ಲಿ ನಮಗೆ ಸೋಲಿಸಿದರು. ಆದರೆ, ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಗೆ ಒಂದು ಕ್ಷೇತ್ರ ಇಲ್ಲದಂತಾಗಿದೆ. ಊರೆಲ್ಲಾ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಹುಣಸೂರಿಗೆ ಬರಲಿ ಎಂದು ಸವಾಲು ಹಾಕಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada