
ಒಮಾನ್ನಲ್ಲಿ ನಡೆಯುತ್ತಿರುವ ಗಲ್ಫ್ ರಾಷ್ಟ್ರಗಳ ಮಹಿಳಾ ತಂಡಗಳ ಜಿಸಿಸಿ ಮಹಿಳಾ ಟಿ20 ಚಾಂಪಿಯನ್ಶಿಪ್ ಕಪ್ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಬಹ್ರೇನ್ 20 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿ ವಿಶ್ವ ದಾಖಲೆ ಬರೆದಿದೆ. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಇದುವರೆಗಿನ ಗರಿಷ್ಠ ಟಿ20 ಮೊತ್ತವಾಗಿದೆ. ಇದರೊಂದಿಗೆ ಟಿ20 ಕ್ರಿಕೆಟ್ ಅತ್ಯಧಿಕ ಮೊತ್ತ ದಾಖಲಿಸಿದ ವಿಶ್ವ ದಾಖಲೆ ಇದೀಗ ಬಹ್ರೇನ್ ದೇಶದ ಪಾಲಾಗಿದೆ. ವಿಶೇಷ ಎಂದರೆ ಈ ಮೊತ್ತವನ್ನು ಚೇಸ್ ಮಾಡಿದ ಸೌದಿ ಅರೇಬಿಯಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 49 ರನ್ ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಬಹ್ರೇನ್ ತಂಡವು ಬರೋಬ್ಬರಿ 269 ರನ್ಗಳ ಭರ್ಜರಿ ಜಯ ಸಾಧಿಸಿತು.
ಇನ್ನು ಈ ಪಂದ್ಯದಲ್ಲಿ 38ರ ಹರೆಯದ ದೀಪಿಕಾ ರಸಾಂಗಿಕಾ ಬಹ್ರೇನ್ ಪರ ಭರ್ಜರಿ ಪ್ರದರ್ಶನ ನೀಡಿದ್ದರು. ಕೇವಲ 66 ಎಸೆತಗಳಲ್ಲಿ ಅಜೇಯ 161 ರನ್ ಗಳಿಸಿದರು. ವಿಶೇಷ ಎಂದರೆ ಮಹಿಳಾ ಟಿ20 ಪಂದ್ಯದಲ್ಲಿ ಬ್ಯಾಟರ್ವೊಬ್ಬರು 150 ಪ್ಲಸ್ ಗಳಿಸಿದ್ದು ಇದೇ ಮೊದಲು
ಈ ಇನ್ನಿಂಗ್ಸ್ನಲ್ಲಿ ದೀಪಿಕಾ 31 ಬೌಂಡರಿಗಳನ್ನು ಬಾರಿಸಿದ್ದರು. ಅಂದರೆ, ಬೌಂಡರಿಯಿಂದ 124 ರನ್ ಮೂಡಿಬಂದಿತ್ತು.
ದೀಪಿಕಾ ಹೊರತಾಗಿ ತಂಡದ ನಾಯಕಿ ತರಂಗ ಗಜನಾಯಕ ಕೂಡ 56 ಎಸೆತಗಳಲ್ಲಿ 94 ರನ್ಗಳ ಇನಿಂಗ್ಸ್ ಆಡಿದರು. ತರಂಗ 17 ಬೌಂಡರಿಗಳನ್ನು ಬಾರಿಸಿದರು. ಬಹ್ರೇನ್ ಇನ್ನಿಂಗ್ಸ್ನಲ್ಲಿ ಒಟ್ಟು 50 ಬೌಂಡರಿಗಳು ಸೇರಿದ್ದವು. ಅಂದರೆ, 318 ರನ್ಗಳಲ್ಲಿ 200 ರನ್ ಬೌಂಡರಿಯಿಂದ ಮೂಡಿ ಬಂದಿತ್ತು. ಮೈರಾ ಖಾನ್ ಸೌದಿ ಅರೇಬಿಯಾದ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಮೈರಾ ತಮ್ಮ 4 ಓವರ್ಗಳಲ್ಲಿ 68 ರನ್ ಬಿಟ್ಟುಕೊಟ್ಟಿದ್ದರು. ಹಾಗೆಯೇ ಇಮಾನ್ ಎಜಾಜ್ 4 ಓವರ್ಗಳಲ್ಲಿ 63 ರನ್ ನೀಡಿದ್ದ ಪುರುಷರ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದುವರೆಗೆ ಯಾವುದೇ ತಂಡ 300 ರನ್ಗಳ ಗಡಿ ದಾಟಿಲ್ಲ. 2019 ರಲ್ಲಿ ಡೆಹ್ರಾಡೂನ್ನಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಮಾಡಿದ 278 ರನ್ಗಳಿಸಿರುವುದು ವಿಶ್ವ ದಾಖಲೆಯಾಗಿದೆ.