ದಾವಣಗೆರೆ ವಿಶ್ವವಿದ್ಯಾಲಯದ 2020-21ನೇ ಸಾಲಿನಲ್ಲಿ ನಡೆಸಿದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಹುಡುಗಿಯರು ರ್ಯಾಂಕ್ ಹಾಗೂ ಸ್ವರ್ಣ ಪದಕ ಗಳಿಕೆಯಲ್ಲಿ ಹುಡುಗರಿಗಿಂತಲೂ ಮುಂದಿದ್ದು, ವಿದ್ಯಾರ್ಥಿನಿಯರು ಚಿನ್ನದ ಬೆಳೆಯನ್ನು ತೆಗೆದಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆಯಲಿರವ 9ನೇ ಘಟಿಕೋತ್ಸವದಲ್ಲಿ ರ್ಯಾಂಕ್ ಹಾಗೂ
ಸ್ವರ್ಣ ಪದಕ ಪಡೆಯುವವರ ಪೈಕಿ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಘಟಿಕೋತ್ಸವದಲ್ಲಿ ಪ್ರದಾನ ಮಾಡುವ ಒಟ್ಟು 79 ಸ್ವರ್ಣ ಪದಕಗಳಲ್ಲಿ 32 ಸ್ವರ್ಣ ಪದಕಗಳನ್ನು ವಿದ್ಯಾರ್ಥಿನಿಯರು ಮುಡಿಗೇರಿಸಿಕೊಳ್ಳಲಿದ್ದಾರೆ. 12 ವಿದ್ಯಾರ್ಥಿಗಳು ಮಾತ್ರ ಚಿನ್ನದ ಪದಕ ಪಡೆಯುತ್ತಿದ್ದಾರೆ. ಒಟ್ಟು 38 ಜನ ಪ್ರಥಮ ರ್ಯಾಂಕ್ ಪಡೆದಿದ್ದು, ಇವರ ಪೈಕಿ 28 ಮಂದಿ ವಿದ್ಯಾರ್ಥಿನಿಯರು.
ಎಂಬಿಎ ವಿಭಾಗದ ಸ್ವಪ್ನ ಎಸ್.ಎಂ. ಐದು ಸ್ವರ್ಣ ಪದಕಗಳನ್ನು ಪಡೆಯಲಿದ್ದು, ಈ ಬಾರಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಲಿರುವ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಲಿಂಗಣ್ಣನಹಳ್ಳಿ ಗ್ರಾಮದ ಶ್ರುತಿ ಟಿ. ನಾಲ್ಕು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ರೈತನ ಮಗಳಾಗಿರುವ ಶ್ರುತಿ ಅವರು ನೆಟ್
ಹಾಗೂ ಕೆ-ಸ್ಲೆಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಉಪನ್ಯಾಸಕಿಯಾಗಬೇಕು ಎಂಬ ಕನಸು ಕಾಣುತ್ತಿದ್ದಾರೆ. ‘ಕಾಲೇಜಿನಲ್ಲಿ ಪ್ರಾಧ್ಯಾಪಕರು ನೀಡಿದ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಅವರು ಸ್ಮರಿಸುತ್ತಾರೆ.
ಅರ್ಥಶಾಸ್ತ್ರ ಎಂ.ಎ.ಯಲ್ಲಿ ರ್ಯಾಂಕ್ ಪಡೆದ ಲತಾ ಎಸ್. ಕಂಬಳಿಮಠ, ಬಿ.ಎಯಲ್ಲಿ ರ್ಯಾಂಕ್ ಪಡೆದ ಹರಿಹರದ ಗಿರಿಯಮ್ಮ ಆರ್. ಕಾಂತಪ್ಪಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಮಮತಾ ಯು. ಹಾಗೂ ಬಿಇಡಿಯಲ್ಲಿ ರ್ಯಾಂಕ್ ಗಳಿಸಿದ ಶ್ರೀಲತಾ ಎನ್.ವೈ. ಅವರೂ ತಲಾ ಮೂರು ಸ್ವರ್ಣ ಪದಕಗಳನ್ನು ಪಡೆದುಕೊಳ್ಳಲಿದ್ದಾರೆ.
ಎಂ.ಎಸ್ಸಿ ಮೈಕ್ರೊಬಯಾಲಜಿಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕೋಡಿಹಳ್ಳಿಯ ಹರ್ಷಿತಾ ಎಂ.ವಿ. ಮೂರು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ.
‘ದಾವಣಗೆರೆಯ ಬಿಸಿಎಂ ಹಾಸ್ಟೆಲ್ನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ಹಾಸ್ಟೆಲ್ನಲ್ಲಿ ಗಲಾಟೆ ಮಾಡುತ್ತಿರುವುದರಿಂದ ಏಕಾಗ್ರತೆಯಿಂದ ಓದಲು ಆಗುತ್ತಿರಲಿಲ್ಲ. ಹೀಗಾಗಿ ರಾತ್ರಿ ಬೇಗನೆ ಊಟ ಮುಗಿಸಿ ಮಲಗುತ್ತಿದ್ದೆ. ಮಧ್ಯರಾತ್ರಿ 12.30ಕ್ಕೆ ಎದ್ದು ಬೆಳಗಿನಜಾವ 5 ಗಂಟೆಯವರೆಗೂ ಓದುತ್ತಿದ್ದೆ. ಏಕಾಗ್ರತೆಯಿಂದಾಗಿ ವಿಷಯ ಮನಸ್ಸಿನ ಆಳಕ್ಕೆ ಇಳಿಯುತ್ತಿತ್ತು. ಚಿನ್ನದ ಪದಕ ಪಡೆಯಬೇಕೆನ್ನುವುದು ಬಾಲ್ಯದ ಕನಸಾಗಿತ್ತು’ ಎಂದು ಹರ್ಷಿತಾ ಆಸಕ್ತಿಕರ ಅನುಭವ ಹಂಚಿಕೊಂಡರು..
ಕೃಷಿ ಕುಟುಂಬದ ಹರ್ಷಿತಾ ಸದ್ಯ ನೆಟ್ ಹಾಗೂ ಕೆ-ಸ್ಲೆಟ್ಗೆ ತರಬೇತಿ ನೀಡುವ ‘ಬ್ರಾಹ್ಮಿ ಅಕಾಡೆಮಿ’ಯಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಟೀಚಿಂಗ್ ನನ್ನ ಪ್ಯಾಷನ್’ ಎನ್ನುವ ಹರ್ಷಿತಾ, ನೆಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada