
ಮೊದಲ ಪಂದ್ಯದಲ್ಲಿ ಚೆನ್ನೈ ಹಾಗೂ ಕೋಲ್ಕತ್ತಾ ಸೆಣೆಸಲಿವೆ. ಆದರೆ ಆರಂಭಕ್ಕೂ ಮುನ್ನ ಸಿಎಸ್ಕೆ ಪಾಳಯದಿಂದ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಅದೆನೆಂದರೆ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ. ಅವರ ಬದಲಿಗೆ ಈಗ ರವೀಂದ್ರ ಜಡೇಜಾ ಸಿಎಸ್ಕೆ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಸಿಎಸ್ಕೆ ಆಡಳಿತ ಮಂಡಳಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ. 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್ನ ಅವಿಭಾಜ್ಯ ಅಂಗವಾಗಿರುವ ಜಡೇಜಾ, ಸಿಎಸ್ಕೆಯನ್ನು ಮುನ್ನಡೆಸುವ ಮೂರನೇ ಆಟಗಾರನಾಗಲಿದ್ದಾರೆ. ಧೋನಿ ಈ ಆವೃತ್ತಿಯಲ್ಲಿ ಮತ್ತು ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ ಎಂದು ಸಿಎಸ್ಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎಂಎಸ್ ಧೋನಿ ಈ ಸೀಸನ್ನಲ್ಲಿ ಆಡಿದ ನಂತರ ಮುಂದಿನ ಸೀಸನ್ನಲ್ಲಿ ನಾಯಕತ್ವ ತೊರೆಯುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಧೋನಿ ಸಿಎಸ್ಕೆ ನಾಯಕತ್ವಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ. ಧೋನಿ ಚೆನ್ನೈ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದು, ನಾಯಕ ಸ್ಥಾನದಿಂದ ಕೆಳಗಿಳಿಯುವ ಧೋನಿ ನಿರ್ಧಾರದಿಂದ ಸಿಎಸ್ಕೆ ಅಭಿಮಾನಿಗಳಿಗೆ ಶಾಕ್ ಆಗಿದೆ. ಧೋನಿ ಐಪಿಎಲ್ನಲ್ಲಿ ಯಶಸ್ವಿ ನಾಯಕರಾಗಿದ್ದು, ಅವರ ನಾಯಕತ್ವದಲ್ಲಿ ಸಿಎಸ್ಕೆ ತಂಡ ಇದುವರೆಗೆ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದೆ.
ಮಹೇಂದ್ರ ಸಿಂಗ್ ಧೋನಿ ಕಳೆದ 12 ಸೀಸನ್ಗಳಲ್ಲಿ ಚೆನ್ನೈ ತಂಡದ ನಾಯಕರಾಗಿದ್ದರು. 2008 ರಲ್ಲಿ ಲೀಗ್ ಪ್ರಾರಂಭವಾದಾಗಿನಿಂದ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ಜವಬ್ದಾರಿ ಹೊತ್ತಿದ್ದರು. ಮ್ಯಾಚ್ ಫಿಕ್ಸಿಂಗ್ ಆರೋಪದಡಿ 2016 ಮತ್ತು 2017ರಲ್ಲಿ ಸಿಎಸ್ಕೆ ತಂಡ ಲೀಗ್ನಲ್ಲಿ ಭಾಗವಹಿಸಿರಲಿಲ್ಲ. ಈ ಎರಡು ಆವೃತ್ತಿಗಳನ್ನು ಹೊರತುಪಡಿಸಿ ಚೆನ್ನೈ ಈ ಲೀಗ್ನ ಅತ್ಯಂತ ಯಶಸ್ವಿ ತಂಡ ಎಂದು ಹೆಸರುವಾಸಿಯಾಗಲು ಧೋನಿ ಪ್ರಮುಖ ಪಾತ್ರವಹಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada