ಸಂಡೇ ಅಂದ್ರೆ ಸಾಕು ಎಲ್ಲರೂ ಮನೆಯಲ್ಲಿ ಏನ್ ಸ್ಪಷೆಲ್ ಅಂತ ಕೇಳ್ತಾರೆ, ಅಷ್ಟರ ಮಟ್ಟಿಗೆ ನಾನ್ವೆಜ್ ಮಾಡುವ ಅಭ್ಯಾಸ ಬೇರೂರಿದೆ. ಆದ್ರೆ ಇದೊಂದು ದೊಡ್ಡ ತಲೆನೋವು ಎನ್ನಬಹುದು. ಪ್ರತಿ ಭಾನುವಾರ ಏನು ಮಾಡೋದು ಅಂತ. ಅದರಲ್ಲೂ ಪ್ರತಿ ಸಲ ಚಿಕನ್, ಮಟನ್ ಸಾರು ಇದನ್ನೇ ಮಾಡಿದ್ರೆ ಬೋರ್ ಆಗುತ್ತೆ, ಏನಪ್ಪ ಮಾಡೋದು ಅಂತ ಇದ್ರೆ ಎಗ್ ಬಿರಿಯಾನಿ ಮಾಡಿ. ಈ ಏಗ್ ಬಿರಿಯಾನಿ ಮಾಡೋದು ಹೇಗೆ, ಎನೆಲ್ಲಾ ಸಾಮಾಗ್ರಿ ಬೇಕು ಎಂಬುದು ಇಲ್ಲಿದೆ.
ಎಗ್ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು
4-5 ಬೇಯಿಸಿದ ಮೊಟ್ಟೆ
2 ಈರುಳ್ಳಿ
1 ಟೊಮೆಟೊ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ ಎಲೆ
2 ಚಮಚ ತುಪ್ಪ
ಒಂದೂವರೆ ಚಮಚ ಎಣ್ಣೆ
ಮುಕ್ಕಾಲು ಕಪ್ ಮೊಸರು
5 ಹಸಿಮೆಣಸಿನ ಕಾಯಿ (ಚಿಕ್ಕದಾಗಿ ಕತ್ತರಿಸಿಕೊಳ್ಳಿ)
ಅರ್ಧ ಚಮಚ ಶುಂಠಿ ಪೇಸ್ಟ್
ಕಾಲು ಚಮಚ ಕೆಂಪು ಮೆಣಸಿನ ಪುಡಿ
ಕಾಲು ಚಮಚ ಕೊತ್ತಂಬರಿ ಪುಡಿ
2 ಚಮಚ ನಿಂಬೆರಸ
ರುಚಿಗೆ ತಕ್ಕಷ್ಟು ಉಪ್ಪು
ಬಿರಿಯಾನಿಗೆ ಮಸಾಲೆ ಮಾಡಲು
4 ಲವಂಗ
ಚಕ್ಕೆ
1 ಚಕ್ರ ಮೊಗ್ಗು
5 ಕರಿಮೆಣಸಿನ ಕಾಳು
ಎಲ್ಲಾ ಪದಾರ್ಥಗಳನ್ನು ಸೇರಿಸಿ ಪುಡಿ ಮಾಡಿ
ಬಿರಿಯಾನಿ ಅನ್ನ ಮಾಡಲು ಬೇಕಾಗುವ ಸಾಮಾಗ್ರಿಗಳು:
ಎರಡೂವರೆ ಕಪ್ ಬಾಸುಮತಿ ಅಕ್ಕಿ
3 ಬೆಳ್ಳುಳ್ಳಿ ಎಸಳು
3 ಲವಂಗ
ಅರ್ಧ ಚಕ್ಕೆ
2 ಪಲಾವ್ ಎಲೆ
5-6 ಪುದೀನಾ ಎಲೆ
ಒಂದು ಚಮಚ ಎಣ್ಣೆ
ನೀರು
ಎಗ್ ಬಿರಿಯಾನಿ ಮಾಡುವ ವಿಧಾನ :
ಮೊದಲಿಗೆ ಬಿರಿಯಾನಿ ಅನ್ನ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ಸೇರಿಸಿ ಅದಕ್ಕೆ ಕೇವಲ ಒಂದು ಚಿಟಿಕೆ ಉಪ್ಪು ಹಾಕಿ ಅನ್ನ ಮಾಡಿ ಒಂದು ಕಡೆ ಇಟ್ಟುಕೊಳ್ಳಿ. ನಂತರ ಒಂದೂವರೆ ಚಮಚ ಎಣ್ಣೆ ಮತ್ತು ಒಂದೂವರೆ ಚಮಚ ತುಪ್ಪ ಹಾಕಿ ಕಾಯಿಸಿ, ನಂತರ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವ ರೀತಿ ಹುರಿಯಬೇಕು. ಹುರಿದ ಈರುಳ್ಳಿಯ ಅರ್ಧದಷ್ಟು ತೆಗೆದು ಬದಿಗಿಟ್ಟುಕೊಳ್ಳಿ. ಉಳಿದ ಅರ್ಧ ಭಾಗ ಈರುಳ್ಳಿಗೆ ಹಸಿ ಮೆಣಸಿನ ಕಾಯಿ, ಟೊಮ್ಯಾಟೋ, ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಬಿರಿಯಾನಿ ಮಸಾಲೆ ಪುಡಿ ಮತ್ತು ಟೊಮ್ಯಾಟೋ, ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ನಂತರ ಅದಕ್ಕೆ ಮೊಸರು ಹಾಕಿ ಚೆನ್ನಾಗಿ ಬೇಯಿಸಿ, ಎಲ್ಲಾ ಪದಾರ್ಥಗಳು ಬೆಂದ ಮೇಲೆ ಅದರಲ್ಲಿ ಮೊಟ್ಟೆಯನ್ನು ಹಾಕಿ ಬೇಯಿಸಿ ಬಿಡಿ. ಈಗ ಸ್ವಲ್ಪ ಅಗಲವಿರುವ ಪಾತ್ರೆ ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ ಅದನ್ನು ಕಾಯಿಸಿ, ಅದು ಕಾದ ನಂತರ ಸ್ವಲ್ಪ ಎಗ್ ಮಸಾಲ ಹಾಗೂ ಬಿರಿಯಾನಿ ಅನ್ನ, ಮತ್ತೆ ಎಗ್ ಮಸಾಲ ಅದರ ಮೇಲೆ ಬಿರಿಯಾನಿ ಅನ್ನ ಹಾಕಿ ಈಗ ಒಂದು ಚಮಚ ತುಪ್ಪ ಹಾಕಿ ನಂತರ ಹುರಿದಿಟ್ಟ ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಬೇಯಿಸಿದರೆ ಎಗ್ ಬಿರಿಯಾನಿ ರೆಡಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada