ಹಿರಿಯ ವಾಗ್ಮಿ, ಹರಟೆ ಕಾರ್ಯಕ್ರಮದ ರೂವಾರಿ ಹಿರೇಮಗಳೂರು ಕಣ್ಣನ್ ಆಡಿರುವ ಮಾತು ವಿವಾದಕ್ಕೆ ಕಾರಣವಾಗಿದೆ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ (Hijab row) ತುಪ್ಪ ಸುರಿದಂತೆ ಮಾಡಿದೆ.
ನಿನ್ನೆ ಮೈಸೂರಿನಲ್ಲಿ ರಂಗಾಯಣ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಹಿಜಾಬ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಹಿರೇಮಗಳೂರು ಕಣ್ಣನ್ (Hiremagaluru Kannan) ಅವರು ಮುಸ್ಲಿಂ ಮಹಿಳೆಯರ ಬಗ್ಗೆ ಆಡಿದ್ದ ಮಾತು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದು ಅವರ ಕೀಳು ಅಭಿರುಚಿ-ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ರಂಗಾಯಣದಲ್ಲಿ , ಬಹುರೂಪಿ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಕಣ್ಣನ್ ಅವರು ಮಾತನಾಡುತ್ತಾ ‘ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಶಾಲಾ- ಕಾಲೇಜುಗಳಿಂದ ಹಿಜಾಬ್ ಹೊರಟುಹೋಗಿದೆ. ಇನ್ಮುಂದೆ ಶಾಲೆಗೆ ಹ್ಯಾಗೆ ಬರಬೇಕು ಎಂದು ಹೇಳಬೇಕು; ಮುಖ ಮುಚ್ಕೊಂಡು ಬರಬೇಡ, ಮುಚ್ಕೊಂಡು ಬಾ. ಏನು ಭಯಾ ರೀ ಮಾತಾಡೋಕೆ? ಡಾಕ್ಟ್ರ ಹತ್ರ ಹೋದ್ರೆ ಎಲ್ಲ ಬಿಚ್ಚಿ ತೋರಿಸ್ತೀರಿ. ಮಾತಾಡಕೆ ಯಾಕೆ ಹೆದರಬೇಕು ಎಂದು ಕೇಳಿದ್ದಾರೆ. ಇವರ ಮಾತಿಗೆ ಚಿಂತಕರು, ವಿಮರ್ಶಕರು, ಲೇಖಕರು ಆಕ್ರೋಶ ಹೊರಹಾಕಿದ್ದಾರೆ.
ಲೇಖಕ ಶಶಿಧರ ಹೆಮ್ಮಾಡಿ, ಈ ನೀಚ ತಾನು ಪೂಜೆ ಮಾಡುವ ಕೋದಂಡರಾಮ ದೇವಾಲಯದಲ್ಲಿ ರಾಮನ ಜೊತೆ ನಿಂತಿರುವ ಸೀತೆಯನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು ಎಂದು ಕೇಳಿದ್ದಾರೆ.
ವಿಮರ್ಶಕ ರಹಮತ್ ತರೀಕೆರೆ ವಿಷಾದಿಸಿದ್ದು, ಕಣ್ಣನ್ ಅವರು, ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾದ ಶಬ್ದ ಬಳಸಿದ ಬಗ್ಗೆ ಓದಿದೆ. ಅವರಿಗೂ ಹೆಣ್ಣು ಮಕ್ಕಳು ಇರಬೇಕು. ಪ್ರಶ್ನೆಯೆಂದರೆ, ಎಲ್ಲಿಂದ ಹುಟ್ಟುತ್ತಿದೆ ಈ ಅಮಾನುಷ ಕಿಲುಬು, ಕ್ಷುದ್ರತೆ? ಕಲೆ ನುಡಿಯನ್ನುಸಂವೇದನಶೀಲಗೊಳಿಸಬೇಕು. ಬದಲಿಗೆ ಮಲಿನಗೊಳಿಸುತ್ತಿದೆ’ ಎಂದು ಹೇಳಿದ್ದಾರೆ.