ರಾಜ್ಯಾದ್ಯಾಂತ ಎಸ್.ಎಸ್.ಎಲ್.ಸಿ ಎಕ್ಸಾಂ ಆರಂಭಗೊಂಡಿದೆ. ಇತ್ತ ಯಾರೋ ಕಿಡಿಗೇಡಿಗಳು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೊಬ್ಬನ ಫೊಟೋ ಇಟ್ಟು ವಾಮಾಚಾರ ಮಾಡಿದ್ದಾರೆ. ಈ ದೃಶ್ಯ ಕಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇಂತಹ ಭಯಾನಕ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ 1ರಲ್ಲಿ ನಡೆದಿದೆ.
ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಬದಿಯಲ್ಲಿ ಸಚಿನ್ ನಾಯಕ ಎಂಬ ವಿದ್ಯಾರ್ಥಿಯ ಫೋಟೋ ಪ್ರೇಮ್ ಮಾಡಿಸಿ ಅದರಲ್ಲಿ ದಿವಂಗತ ಎಂಬ ಹೆಸರನ್ನೂ ಹಾಕಿಸಿದ್ದಾರೆ. ಆ ಫೋಟೋಗೆ ಹೂವಿನಹಾರ ಹಾಕಿ, ತೆಂಗಿನಕಾಯಿ ಒಡೆದು, ಕುಡಿಕೆ, ಅರಿಶಿಣ-ಕುಂಕುಮ ಇಟ್ಟು, ಎಕ್ಸಾಂ ಹಾಲ್ ಟಿಕೆಟ್ ಝರಾಕ್ಸ್ ಪ್ರತಿ ತಿಥಿಯ ಮಾದರಿಯಲ್ಲಿ ಪೂಜೆ ಮಾಡಿದ್ದಾರೆ. ಜತೆಗೆ ಗೊಂಬೆಯನ್ನೂ ಇಟ್ಟಿದ್ದಾರೆ. ವಾಮಾಚಾರದ ಕುರುಹು ಕಂಡ ಜನ ಬೆಚ್ಚಿಬಿದ್ದಿದ್ದಾರೆ. ಅತ್ತ ಭಯದಲ್ಲೇ ವಿದ್ಯಾರ್ಥಿ ಸಚಿನ್ ನಾಯಕ ಪರೀಕ್ಷೆಗೆ ಬರೆಯಲು ಹೋಗಿದ್ದಾನೆ.
ಸಚಿನ್ನ ಪೋಷಕರು ಕೂಡ ಆತಂಕಗೊಂಡಿದ್ದಾರೆ. ಬಾಳಿ-ಬದುಕಬೇಕಾದ ಮಗನ ಬಾಳಲ್ಲಿ ಯಾಕೆ ಆಟವಾಡುತ್ತಿದ್ದಾರೆ. ನಮ್ಮ ಮಗ ಜೀವಂತವಾಗಿದ್ದರೂ ಫೋಟೋ ಇಟ್ಟು ತಿಥಿ ಮಾಡಿದ್ದಾರೆ. ವಾಮಾಚಾರ ಮಾಡಿದ್ದಾರೆ. ನಮಗೆ ತುಂಬಾ ಭಯವಾಗ್ತಿದೆ. ಇದನ್ನ ನೋಡಿದ ನಮ್ಮ ಮಗ ಮಾನಸಿಕವಾಗಿ ಕುಗ್ಗಿ ಹೋಗ್ತಿದ್ದಾನೆ. ಪೊಲೀಸರು ದುಷ್ಕರ್ಮಿಗಳನ್ನ ಪತ್ತೆ ಮಾಡಿ ತಕ್ಕ ಶಿಕ್ಷೆ ಕೊಡಬೇಕು ಎಂದು ವಿದ್ಯಾರ್ಥಿಯ ಪೋಷಕರು ಮನವಿ ಮಾಡಿದ್ದಾರೆ.