ಮಾರ್ಚ್-ಏಪ್ರಿಲ್ನಲ್ಲಿ ಎಸ್ ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ 46,657 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.ನಗರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 173 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಅದರಲ್ಲಿ ಸೂಕ್ಷ್ಮ ಕೇಂದ್ರಗಳು 19, ಅತೀ ಸೂಕ್ಷ್ಮ ಕೇಂದ್ರ 1 ಇದ್ದು, ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದ್ದು,ನಕಲು ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸೂಕ್ಷ್ಮ ಕೇಂದ್ರಗಳು, ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಮಕ್ಕಳಿಗೆ ಪರೀಕ್ಷೆ ಬರೆಯಲು ಅಡೆ- ತಡೆಯಾಗದಂತೆ ಮುನ್ನೆಚ್ಚರಿಕೆಯಾಗಿ ಸರಿಯಾದ ಫ್ಯಾನ್ ಮತ್ತು ಆಸನ ವ್ಯವಸ್ಥೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು,ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್ ತರುವಂತಿಲ್ಲ. ಪರೀಕ್ಷಾ ಕೇಂದ್ರದ ಸುತ್ತ-ಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.