ರಾಜಮೌಳಿ ನಿರ್ದೇಶನದ RRR ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು ಭಾರಿ ಜನಮನ್ನಣೆ ಗಳಿಸಿಕೊಂಡಿದೆ. ರಾಜ್ಯದಲ್ಲಿ ಹಲವು ಕಸರತ್ತುಗಳು ಬಳಿಕ ನೂರಾರು ಚಿತ್ರಮಂದಿರಗಳಲ್ಲಿ RRR ಸಿನಿಮಾ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.
RRR ಸಿನಿಮಾದ ಬಿಡುಗಡೆಗೆ ಪುನೀತ್ ಅವರ ಕೊನೆಯ ಸಿನಿಮಾ ಜೇಮ್ಸ್ ಎತ್ತಂಗಡಿ ಮಾಡುವ ಪರಿಸ್ಥಿತಿ ಉದ್ಭವಿಸಿತ್ತು. ಶಿವರಾಜ್ ಕುಮಾರ್ ಅವರ ಹೋರಾಟದ ಫಲದಿಂದ ‘ಜೇಮ್ಸ್’ ಸಿನಿಮಾ ಉಳಿದುಕೊಂಡಿತು. ಆದರೂ RRR ಸಿನಿಮಾ ಬೆಂಗಳೂರಿನ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡು ಪ್ರದರ್ಶನ ಕಾಣುತ್ತಿದೆ.
ಈಗ RRR ಕಾರಣಕ್ಕೆ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದ ಪರಿಸ್ಥಿತಿ ಉದ್ಭವವಾಗಿದೆ. ಈ ಶುಕ್ರವಾರ ಕನ್ನಡದ ಹರೀಶ್ ವಯಸ್ಸು 36 ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರಮಂದಿರಗಳ ಕೊರತೆಯಿಂದಾಗಿ ಅವರು ಸಿನಿಮಾವನ್ನು ಬಿಡುಗಡೆ ಮಾಡುತ್ತಿಲ್ಲ. ಏಪ್ರಿಲ್ 08 ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.
ಇದೇ ವಾರ ಬಿಡುಗಡೆ ಆಗಬೇಕಿದ್ದ ತ್ರಿಕೋನ ಸಿನಿಮಾ ಸಹ ಬಿಡುಗಡೆ ಮುಂದೂಡುವ ಬಗ್ಗೆ ಯೋಜಿಸಿದೆ. ಜೊತೆಗೆ ನಟ ಸಂಚಾರಿ ವಿಜಯ್ರ ತಲೆದಂಡ ಸಿನಿಮಾ ಏಪ್ರಿಲ್ 01ರಂದು ಬಿಡುಗಡೆಗೆ ಸಜ್ಜಾಗಿದ್ದು, ಅವರಿಗೂ ಚಿತ್ರಮಂದಿರದ ಸಮಸ್ಯೆ ಎದುರಾಗಿದೆ.
ರಾಜ್ಯದ ಸುಮಾರು 500 ಚಿತ್ರಮಂದಿರಗಳಲ್ಲಿ RRR ಸಿನಿಮಾ ಪ್ರದರ್ಶನ ಕಾಣುತ್ತಿದೆ. 280 ಚಿತ್ರಮಂದಿರಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣುತ್ತಿದೆ. 100 ಕ್ಕಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಿಗುವುದಾದರೂ ಹೇಗೆ?
RRR ಸಿನಿಮಾ ಬಿಡುಗಡೆಗೆ ಮುನ್ನವೇ ಚಿತ್ರಮಂದಿರಗಳ ಸಮಸ್ಯೆ ಬಗ್ಗೆ ಚರ್ಚೆ ನಡೆದಿತ್ತು. ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದ ಪುನೀತ್ ಅಭಿನಯದ ಜೇಮ್ಸ್ ಸಿನಿಮಾವನ್ನು ತೆಗೆದು ಆ ಚಿತ್ರಮಂದಿರಗಳಲ್ಲಿ RRR ಪ್ರದರ್ಶಿಸುವ ಪ್ರಯತ್ನ ಮಾಡಲಾಗಿತ್ತು. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗೂ ನಟ ಶಿವರಾಜ್ ಕುಮಾರ್ ಪ್ರಯತ್ನದಿಂದ RRR ವಿತರಕರ ಆಸೆ ಈಡೇರಲಿಲ್ಲ. ಹಾಗಾಗಿ ಮೊದಲ ವಾರದ ಬಳಿಕ ಚಿತ್ರಮಂದಿರಗಳನ್ನು ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿ RRR ಇದೆ ಎನ್ನಲಾಗುತ್ತಿದೆ.
ಜೂ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ನಟನೆಯ RRR ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ಕುರಿತಾದ ಕಾಲ್ಪನಿಕ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ನಟ ಅಜಯ್ ದೇವಗನ್, ಶ್ರೆಯಾ ಶಿರಿನ್, ಸಮುತಿರಕಿಣಿ, ಮಕರಂದ್ ದೇಶಪಾಂಡೆ ಇನ್ನೂ ಕೆಲವರಿದ್ದಾರೆ. ಸಿನಿಮಾವು ಬಿಡುಗಡೆ ಆದ ಮೂರೇ ದಿನಕ್ಕೆ 500 ಕೋಟಿ ಹಣ ಕಲೆಕ್ಷನ್ ಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada