ರಾಷ್ಟ್ರಕವಿ ಕುವೆಂಪು ರಚನೆಯ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ನಮ್ಮ ನಾಡಗೀತೆಗೆ ಹೊಸ ರೂಪ
ಈ ನಾಡ ಗೀತೆಯನ್ನು ಹಲವಾರು ಗಾಯಕರು ತಮ್ಮದೇ ಆದ ಶೈಲಿಯಲ್ಲಿ ಹಾಡಿದ್ದಾರೆ.
ಆರಂಭದಿಂದಲೂ ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಗೌರವ, ಅಭಿಮಾನ ಇಟ್ಟುಕೊಂಡಿರುವ ನಟ, ನಿರ್ಮಾಪಕ, ಉದ್ಯಮಿ ಹಾಗೂ ಗೋಪ್ರೇಮಿ ಮಹೇಂದ್ರ ಮುನ್ನೋತ್ ರವರು.ನಮ್ಮ ನಾಡಗೀತೆಗೆ ಹೊಸರಾಗದ ಜೊತೆಗೆ ಹೊಸ ದೃಶ್ಯರೂಪ ನೀಡಿದ್ದಾರೆ.ಆ ಹಾಡಿನ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ರೇಣುಕಾಂಭ ಸ್ಟುಡಿಯೋದಲ್ಲಿ ನಡೆಯಿತು. ಬಿ.ಪಿ.ಹರಿಹರನ್ ಈ ಹಾಡಿನ ನಿರ್ದೇಶನ ಮಾಡಿದ್ದು, ವಿಜಯಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಪವನ್ ನೃತ್ಯ ನಿರ್ದೇಶನ ಹಾಗೂ ಕಲಾನಿರ್ದೇಶನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಂದ್ರ ಮುನ್ನೋತ್, ಇತ್ತೀಚೆಗೆ ನಮ್ಮ ನಾಡಗೀತೆಯನ್ನು ಮೊಟಕುಗೊಳಿಸಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿತು. ಕುವೆಂಪು ಅಂಥಹ ಮಹಾನ್ ಕವಿ ರಚಿಸಿದ ಸಾಹಿತ್ಯವನ್ನು ಕಡಿತ ಮಾಡಿರುವುದು ಸರಿಯಲ್ಲ. ಹಾಗಾಗಿ ಈ ಗೀತೆಗೆ ಹೊಸರಾಗ ಜೋಡಿಸಿ ಚಿತ್ರೀಕರಣ ಮಾಡಿದೆವು. ನಾನು ರಾಜಸ್ಥಾನದಲ್ಲಿ ಜನಿಸಿದವನಾದರೂ ಕನ್ನಡವೇ ನನ್ನ ಉಸಿರು, ಈ ನೆಲ ನನಗೆ ಎಲ್ಲವನ್ನೂ ಕೊಟ್ಟಿದೆ. ಈ ಹಾಡನ್ನು ಎಲ್ಲರೂ ವೀಕ್ಷಿಸಿ ಕನ್ನಡವನ್ನು ಬೆಳೆಸಿ ಎಂದು ಕೇಳಿಕೊಂಡರು.
ಸಂಗೀತ ನಿರ್ದೇಶಕ ವಿಜಯಕೃಷ್ಣ ಮಾತನಾಡಿ ಇದನ್ನು ಎಸ್ ಪಿ ಬಿ ಅವರು ಹಾಡಬೇಕಿತ್ತು. ಹಾಡುಕೇಳಿ ಒಪ್ಪಿದ್ದರು. ಹೊಸ ಟ್ಯೂನ್ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಿದೆ ಎಂದರು. ನಿರ್ದೇಶಕ ಹರಿಹರನ್ ಮಾತನಾಡಿ ಈ ಗೀತೆಯನ್ನು ಕೊಡಚಾದ್ರಿಯಲ್ಲಿ ಚಿತ್ರೀಕರಿಸಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ ಚಿಕ್ಕಮಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದೇವೆ.ನಮ್ಮ ಈ ಗೀತೆಯನ್ನು ಎರಡು ಶೈಲಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದರು.
ಒಟ್ಟಿನಲ್ಲಿ ನಾಡಪ್ರೇಮಿಗಳಿಗೆ ಮಹಾನ್ ಕವಿ ಕುವೆಂಪು ರವರು ರಚಿಸಿರುವ ನಾಡಗೀತೆ ಮತ್ತೊಂದು ಶೈಲಿಯಲ್ಲಿ ನೋಡಲು ಆಸ್ವಾದಿಸಲು ಲಭ್ಯವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada