2017 ರಲ್ಲಿ ತೆರೆಕಂಡ ಹುಪ್ಪು ಹುಳಿ ಖಾರ ಸಿನಿಮಾ ನಂತರ ನಟಿ ಮಾಲಾಶ್ರಿ ಮತ್ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಕೋವಿಡ್ ಸಾಂಕ್ರಾಮಿಕ ಹಾಗೂ ವಯಕ್ತಿಕ ಕಾರಣಗಳಿಂದಾಗಿ ಮಾಲಾಶ್ರೀ ಚಿತ್ರರಂಗದಿಂದ ದೂರ ಉಳಿದಿದ್ದರು.
ನಿರ್ಮಾಪಕ ರಾಮು ಅವರ ನಿಧನದ ನೋವಿನಿಂದ ಹೊರಬರುತ್ತಿರುವ ಮಾಲಾಶ್ರೀ ರವೀಂದ್ರ ವಂಶಿ ನಿರ್ದೇಶನ ಆಯಕ್ಷನ್ ಥ್ರಿಲ್ಲರ್ ನಲ್ಲಿ ನಟಿಸುತ್ತಿದ್ದಾರೆ.
ಸೋಮವಾರದಿಂದ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ರವೀಂದ್ರ ಅವರ ನಾಲ್ಕನೇ ನಿರ್ದೇಶನದ ಸಿನಿಮಾ ಇದಾಗಿದೆ, ಈ ಮೊದಲು ಪುಟಾಣಿ ಸಫಾರಿ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ರವೀಂದ್ರ ಮಟ್ಟ ಮತ್ತು ವಸಂತ ನಲಿದಾಗ ಚಿತ್ರಿಗಳಿಗೆ ಆಯಕ್ಷನ್ ಕಟ್ ಹೇಳಿದ್ದಾರೆ.
ಮಾಲಾಶ್ರೀ ಚಿತ್ರದ ಮೊದಲ ಸ್ಟಿಲ್ಸ್ ಅನ್ನು ನಿರ್ದೇಶಕರು ಹಂಚಿಕೊಂಡಿದ್ದಾರೆ. 15 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವರು ವೈದ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಮಾಸ್ ಮತ್ತು ಕ್ಲಾಸ್ ಸಂಯೋಜನೆಯಾಗಿದ್ದು, ಮಾಲಾಶ್ರೀ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ರವೀಂದ್ರ
ಹೇಳುತ್ತಾರೆ, “ಆಕ್ಷನ್-ಥ್ರಿಲ್ಲರ್ ನೈಜ ಘಟನೆಗಳನ್ನು ಆಧರಿಸಿದೆ, ಮತ್ತು ಇಡೀ ಚಿತ್ರವು ಆಸ್ಪತ್ರೆಯ ಸುತ್ತ ಕೇಂದ್ರೀಕೃತವಾಗಿದೆ.
ತಮ್ಮ ಹೊಸ ಸಿನಿಮಾ ಕುರಿತಂತೆ ಮಾತನಾಡಿರುವ ಮಾಲಾಶ್ರೀ, ತಾವು ಹೊಸ ರೀತಿಯ ಕಥೆಯೊಂದಿಗೆ ಮರಳಲು ಬಯಸಿದ್ದೆ, ರವೀಂದ್ರ ಅವರ ಕಥೆ ನನಗೆ ಹಿಡಿಸಿತು ಎಂದು ಹೇಳಿದ್ದಾರೆ, ಆರ್ಮಿ ವೈದ್ಯೆ ಪಾತ್ರ ಇಷ್ಟವಾಯಿತು, ಚಿತ್ರದಲ್ಲಿ ವೈದ್ಯೆಯಾಗಿ ನಟಿಸುವುದು ರೋಮಾಂಚನಕಾರಿಯಾಗಿದೆ, ತಾವು ಕೊನೆಯದಾಗಿ ಮೃತುಂಜಯ ಚಿತ್ರದಲ್ಲಿ ವೈದ್ಯೆಯಾಗಿ ನಟಿಸಿದ್ದನ್ನು ಮಾಲಾಶ್ರೀ ನೆನಪಿಸಿಕೊಂಡರು.
ಮಾಸ್ ಅಪೀಲ್ ಇರುವ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಮಾಲಾಶ್ರೀ, ಈ ಚಿತ್ರವೂ ತನ್ನ ಅದೇ ರೀತಿಯಲ್ಲಿ ಬರಲಿದೆ. ಪ್ರೇಕ್ಷಕರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೋ ಅದರಂತೆ ನಾನು ಹೋಗಬೇಕು, ಅದಕ್ಕೆ ತಕ್ಕಂತೆ ನಿರ್ದೇಶಕರು ಪಾತ್ರವನ್ನು ಚಿತ್ರಿಸಿದ್ದಾರೆ. ಇದು ನನಗೆ ಹೊಸ ಪ್ರಕಾರವಾಗಿದ್ದರೂ, ಮಾಸ್ ಅಂಶವನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ ಮಾಲಾಶ್ರೀ.
ಮಾಲಾಶ್ರೀ ಅವರಿಗೆ ಅನೇಕ ಆಫರ್ ಗಳು ಬರುತ್ತಿದ್ದು, ಉತ್ತಮ ಕಥೆ ಆಯ್ಕೆ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದಾರೆ, ನಟನೆ ನನ್ನನ್ನು ಸಂತೋಷವಾಗಿರಿಸುತ್ತದೆ. ಮಕ್ಕಳು ನನಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ಒಳ್ಳೆಯ ಕಥೆಗಳನ್ನು ತೆಗೆದುಕೊಳ್ಳುವಂತೆ ಅವರು ನನಗೆ ಹೇಳುತ್ತಾರೆ ಎಂದಿದ್ದಾರೆ.
ಸ್ವರ್ಣಗಂಗಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಿಎಸ್ ಚಂದ್ರಶೇಖರ್ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ರಂಗಾಯಣ ರಘು, ಸಾಧು ಕೋಕಿಲ, ಬಿಗ್ ಬಾಸ್ ಸೀಸನ್ 8 ವಿಜೇತ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.. ಮಾಲಾಶ್ರೀ ಜೊತೆ ನಿರ್ದೇಶಕರು ಮತ್ತೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರೆ .