ಪಂಡಿತ್ ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವ ಸಮಾರೋಪ ಸಂಗೀತೋತ್ಸವದ ಮೂರನೇ ದಿನವಾದ ಮಂಗಳವಾರ ರಂಗಪಂಚಮಿಯಂದು ಯುವ ಹಾಗೂ ಅನುಭವಿ ಗಾಯಕರ ರಾಗ, ತಾಳಗಳು ಮೇಳೈಸಿದವು.
ಪುಣೆಯ ವಿದುಷಿ ಮಂಜೂಷಾ ಪಾಟೀಲ ಕುಲಕರ್ಣಿ ಅವರು ಮನನೋಹಕ ಛಾಯಾನಟ್ ರಾಗದೊಂದಿಗೆ ತಮ್ಮ ಕಛೇರಿ ಆರಂಭಿಸಿದರು.
ತಮ್ಮ ಸುಮಧರ ಕಂಠದಲ್ಲಿ ಪಾರಂಪರಿಕ ಬಂದಿಶ್ಗಳನ್ನು ಅವರು ಪ್ರಸ್ತುತಪಡಿಸಿದರು.
ವಿಲಂಬಿತ್ ಏಕತಾಲ್ನಲ್ಲಿ ‘ಏರಿ ಆವ ಬೂದೆ ಲಾ…’, ಧೃತ್ ತೀನ್ತಾಳದಲ್ಲಿ ‘ಝನನ ಝನನ ಬಾಜೆ…’ ಹಾಗೂ ‘ಏರಿ ಮಾಲನಿಯಾ…’ ಬಂದಿಶ್ಗಳ ಪ್ರಸ್ತುತಿಗೆ ನೆರೆದ ಶ್ರೋತೃಗಳಿಂದ ಅಖಂಡ ಕರತಾಡನ ಹರಿದುಬಂತು.
ರಂಗಪಂಚಮಿಯ ಅಂಗವಾಗಿ ಮಂಜೂಷಾ ಅವರು ಬಸಂತ ರಾಗದಲ್ಲಿ ‘ಕಾನ್ಹಾ ರಂಗವಾ ನ ಡಾರೋ…’ ಬಂದಿಶ್ ಅನ್ನು ಪ್ರಸ್ತುತಪಡಿಸುವ ಮೂಲಕ ಕೃಷ್ಣ-ರಾಧೆಯರ ಓಕುಳಿಯಾಟದ ಬೃಂದಾವನಕ್ಕೆ ಕರೆದೊಯ್ದರು. ಇದರಲ್ಲಿ ಪ್ರಸ್ತುತಪಡಿಸಿದ ತರಾನಾ ಕೂಡಾ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.
ನಂತರ ಶ್ರೋತೃಗಳ ಇಚ್ಛೆಯಂತೆ ಪುರಂದರ ದಾಸರ ‘ನಿನ್ನ ನೋಡಿ ಧನ್ಯನಾದೆನೋ’ ಪದ ಹಾಡಿ ಮನ ತಣಿಸಿದರು. ಇವರಿಗೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಹಾಗೂ ಹಾರ್ಮೋನಿಯಂನಲ್ಲಿ ಗುರುಪ್ರಸಾದ ಹೆಗಡೆ ಸಾಥ್ ನೀಡಿದರು.
ಆರಂಭದಲ್ಲಿ ಸಂಧಿಪ್ರಕಾಶ ರಾಗ ಮಾರ್ವಾ ಪ್ರಸ್ತುತಿಯೊಂದಿಗೆ ಪುಣೆಯ ಯುವ ಗಾಯಕ ವಿನಯ ರಾಮದಾಸನ್ ಅವರು ತಮ್ಮ ಕಛೇರಿ ಆರಂಭಿಸಿದರು. ನಂತರ ಮಧುಕೌಂಸ್ ರಾಗವನ್ನು ಸಾದರಪಡಿಸಿದರು. ಇವರ ಗಾಯನಕ್ಕೆ ಸಭಿಕರು ತಲೆದೂಗಿದರು. ಇವರಿಗೆ ಶ್ರೀವತ್ಸ ಕೌಲಗಿ ಅವರು ತಬಲಾದಲ್ಲಿ ಹಾಗೂ ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಪುಣೆಯ ಪಂ.ಕಾಣೇಬುವಾ ಪ್ರತಿಷ್ಠಾನದ ಅಧ್ಯಕ್ಷ, ಸಂಗೀತೋತ್ಸವಗಳ ಸಂಘಟಕರಾದ ಗೋವಿಂದರಾವ್ ಭೇಡೆಕರ್ ಹಾಗೂ ಕಾರ್ಯದರ್ಶಿ ಮಂಜೂಷಾ ಪಾಟೀಲ ಕುಲಕರ್ಣಿ ಅವರನ್ನು ಪಂ.ಡಾ.ಎಂ.ವೆಂಕಟೇಶ ಕುಮಾರ್ ಹಾಗೂ ಗಣಪತಿ ಭಟ್ ಹಾಸಣಗಿ ಅವರುಸನ್ಮಾನಿಸಿದರು. ಈ ಸಂದರ್ಭದಲ್ಲಿ ಅನಂತರ ಹರಿಹರ ಹಾಗೂ ಸಮೀರ ಜೋಶಿ ಇದ್ದರು.