ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಬುಧವಾರ ವಿಷಪೂರಿತ ಚಾಕೊಲೇಟ್ ಗಳನ್ನು ಸೇವಿಸಿ ನಾಲ್ಕು ಮಕ್ಕಳು ಅಸು ನೀಗಿದ್ದಾರೆ.
ಮೃತ ಮಕ್ಕಳನ್ನು ರಸಗುಲ್ ಮೂಲದ ಮಂಜನಾ (7), ಸ್ವೀಟಿ (5), ಸಮರ್ (3) ಮತ್ತು ಆಯುಷ್ (5) ಎಂದು ಗುರುತಿಸಲಾಗಿದ್ದು, ಬಲಿಯಾದ ನಾಲ್ವರಲ್ಲಿ ಮೂವರು ಸಹೋದರರು.
ಕಸಯ ಪೊಲೀಸ್ ಠಾಣಾ ವ್ಯಾಪ್ತಿಯ ದಿಲೀಪ್ನಗರ ಗ್ರಾಮದ ಸಿಸೈ ಲಾಥೌರ್ ತೋಲಾದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಈ ಸಂಚಿನ ಹಿಂದೆ ಮೂವರು ವ್ಯಕ್ತಿಗಳ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿರುವುದರಿಂದ ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.