ಕನ್ನಡದ ಮುದ್ದು ಮುಖದ ಚೆಲುವೆ ರಕ್ಷಿತಾ ಕಲಾವಿದರ ಕುಟುಂಬದಿಂದಲೇ ಬಂದವರು. ತಂದೆ ಗೌರಿಶಂಕರ್ ಖ್ಯಾತ ಛಾಯಾಗ್ರಾಹಕರಾಗಿದ್ದರೆ, ತಾಯಿ ಮಮತಾ ರಾವ್ ಹಿರಿಯ ನಟಿ. ರಾಜ್ ಕುಮಾರ್ ಸೇರಿದಂತೆ ಅನೇಕರ ಜೊತೆ ಮಮತಾ ರಾವ್ ನಟಿಸಿದ್ದಾರೆ. ಇವರ ಮುದ್ದಿನ ಮಗಳೇ ಶ್ವೇತಾ ಅಲಿಯಾಸ್ ರಕ್ಷಿತಾ.
ನಟಿ ರಕ್ಷಿತಾ ಪ್ರೇಮ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳಿನಲ್ಲೂ ತಮ್ಮ ಛಾಪು ಮೂಡಿಸಿದ್ದ ರಕ್ಷಿತಾ, ಬೋಲ್ಡ್ ಪಾತ್ರಗಳಿಂದಲೇ ಹೆಸರಾದವರು. ‘ಕ್ರೇಜಿ ಕ್ವೀನ್’ ಅಂತಲೇ ಅಭಿಮಾನಿಗಳಿಂದ ಕರೆಸಿಕೊಂಡ ರಕ್ಷಿತಾ, ಮದುವೆ ಬಳಿಕ ಚಿತ್ರರಂಗದಿಂದ ದೂರವಾದರು. ಬಳಿಕ ಕಿರುತೆರೆ ಮೂಲಕ ಮರುಪ್ರವೇಶ ಮಾಡಿದ ಅವರು, ಇದೀಗ ನಿರ್ಮಾಪಕಿಯೂ ಹೌದು.
ಶ್ವೇತಾ ಆಗಿದ್ದವರು ರಕ್ಷಿತಾ ಆಗಿದ್ದು ಅಪ್ಪು ಸಿನಿಮಾ ಮೂಲಕ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೊದಲ ಸಿನಿಮಾದಲ್ಲಿ ನಾಯಕಿಯಾಗಿದ್ದು ರಕ್ಷಿತಾ. 2002, ಏಪ್ರಿಲ್ 26ರಂದು ತೆರೆಗೆ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಅಲ್ಲಿಂದ ಮುಂದೆ ರಕ್ಷಿತಾ ಕನ್ನಡದ ಜನಪ್ರಿಯ ನಟಿಯಾದರು.
ರಕ್ಷಿತಾ ತಮ್ಮ ಬೋಲ್ಡ್ ಅಭಿನಯದಿಂದಲೇ ಹೆಸರು ಮಾಡಿದವರು. ಜೊತೆಗೆ ತಮ್ಮ ಲವಲವಿಕೆಯ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದರು. ಅಪ್ಪು, ಧಮ್, ವಿಜಯಸಿಂಹ, ಕಲಾಸಿಪಾಳ್ಯ, ಮಂಡ್ಯ, ತನನಂ ತನನಂ ಮುಂತಾದ ಸಿಿನಿಮಾಗಳಲ್ಲಿ ರಕ್ಷಿತಾ ನಟಿಸಿದ್ದಾರೆ.
ಕನ್ನಡದ ಜನಪ್ರಿಯ ಜೋಡಿಗಳಲ್ಲಿ ರಕ್ಷಿತಾ ಹಾಗೂ ದರ್ಶನ್ ಜೋಡಿ ಕೂಡ ಒಂದು. ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ, ಅಯ್ಯ ಮತ್ತಿತರ ಸಿನಿಮಾಗಳಲ್ಲಿ ಈ ಜೋಡಿ ಮೋಡಿ ಮಾಡಿತ್ತು.
ಕನ್ನಡ ಅಷ್ಟೇ ಅಲ್ಲದೇ ತಮಿಳು ಹಾಗೂ ತೆಲುಗಿನಲ್ಲೂ ರಕ್ಷಿತಾ ತಮ್ಮ ಛಾಪು ಮೂಡಿಸಿದ್ದಾರೆ. ಜ್ಯೂನಿಯರ್ ಎನ್ಟಿಆರ್, ರವಿತೇಜಾ ಸೇರಿದಂತೆ ಪ್ರಮುಖ ನಟರ ಜೊತೆ ನಾಯಕಿಯಾಗಿ ರಕ್ಷಿತಾ ಸ್ಕ್ರೀನ್ ಶೇರ್ ಮಾಡಿದ್ದಾರೆ.
15 ವರ್ಷಗಳ ಹಿಂದೆ ನಟಿ ರಕ್ಷಿತಾ ನಿರ್ದೇಶಕ ಪ್ರೇಮ್ ಅವರನ್ನು ವಿವಾಹವಾದರು. ಪ್ರೀತಿಸಿ ವಿವಾಹವಾದ ರಕ್ಷಿತಾ, ಬಳಿಕ ರಕ್ಷಿತಾ ಪ್ರೇಮ್ ಆದರು. ಬಳಿಕ ಅಭಿನಯಕ್ಕೆ ಗುಡ್ ಬಾಯ್ ಹೇಳಿದರು. ಇದಾದ ಮೇಲೆ ಕಿರುತೆರೆ ಜಡ್ಜ್ ಆಗಿ ಮರುಪ್ರವೇಶ ಮಾಡಿದರು. ಇದೀಗ ಈ ಜೋಡಿಗೆ ಮುದ್ದಾದ ಮಗನಿದ್ದಾನೆ.
ಇದೀಗ ರಕ್ಷಿತಾ ಪ್ರೇಮ್ ನಿರ್ಮಾಪಕಿಯೂ ಆಗಿದ್ದಾರೆ. ತಮ್ಮದೇ ಸಹೋದರ ರಾಣಾ ಅವರನ್ನು ತಮ್ಮದೇ ಬ್ಯಾನರ್ನಲ್ಲಿ ಹೀರೋವನ್ನಾಗಿ ಪರಿಚಯಿಸಿದ್ದಾರೆ. ಪ್ರೇಮಿಗಳ ದಿನದಂದು ಇವರ ನಿರ್ಮಾಣದ ಏಕ್ ಲವ್ ಯಾ ಸಿನಿಮಾ ರಿಲೀಸ್ ಆಗಿತ್ತು.
April 03 ರಕ್ಷಿತಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪತಿ ಪ್ರೇಮ್ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದ ಗಣ್ಯರು ರಕ್ಷಿತಾಗೆ ಶುಭ ಕೋರಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ವಿ ಲವ್ ಯಾ ಅಂತ ಹಾರೈಸಿದ್ದಾರೆ,