ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರು ರೈಲ್ವೆ ವಿಭಾಗದ ಎಸಿ ಮೆಕ್ಯಾನಿಕ್ ಮತ್ತು ಗುಂತಕಲ್ ವಿಭಾಗದ ಟ್ರಾವೆಲಿಂಗ್ ಟಿಕೆಟ್ ಪರೀಕ್ಷಕ ನಡುವೆ ಮಂಗಳವಾರ ತೀವ್ರ ವಾಗ್ವಾದ ಮತ್ತು ದೈಹಿಕ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ರೈಲ್ವೆ ವಿಭಾಗದ ಎಸಿ ಮೆಕ್ಯಾನಿಕ್ ಅರುಣ್ ಕುಮಾರ್ ಮತ್ತು ಗುಂತಕಲ್ ವಿಭಾಗದ ಟ್ರಾವೆಲಿಂಗ್ ಟಿಕೆಟ್ ಪರೀಕ್ಷಕ ನಡುವೆ ಮಂಗಳವಾರ ತೀವ್ರ ವಾಗ್ವಾದ ಮತ್ತು ದೈಹಿಕ ಮಾರಾಮಾರಿ ನಡೆದಿದ್ದು, ಅರುಣ್ ಕುಮಾರ್ ವಿರುದ್ಧ ಆರು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಆತನನ್ನು ಮಂಗಳವಾರ ಸಂಜೆ ಬಂಧಿಸಲಾಗಿದೆ. 43 ವರ್ಷದ ಅರುಣ್ ಕುಮಾರ್ ಯಶವಂತಪುರ ಡಿಪೋದಲ್ಲಿ ಎಲೆಕ್ಟ್ರಿಕಲ್ ಎಸಿ ವಿಭಾಗದಲ್ಲಿ ಹಿರಿಯ ತಂತ್ರಜ್ಞರಾಗಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ?
ರೈಲ್ವೇ ಮೂಲದ ಪ್ರಕಾರ, ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ಗೆ ಹೋಗುವ ರೈಲು ಸಂಖ್ಯೆ 12649 ರಲ್ಲಿ ಪ್ರಯಾಣ ಟಿಕೆಟ್ ಪರೀಕ್ಷಕರು (ಟಿಟಿಇ) ಪ್ರಯಾಣಿಕರ ಟಿಕೇಟನ್ನು ಪರಿಶೀಲಿಸುವಾಗ ತಮ್ಮ ಗುರುತಿನ ಚೀಟಿಯನ್ನು (ರೈಲಿನಲ್ಲಿ ರೈಲ್ವೆ ಸಿಬ್ಬಂದಿಗೆ ಉಚಿತ ಪ್ರಯಾಣವನ್ನು ಅನುಮತಿಸುವ) ತೋರಿಸಲು ಅರುಣ್ ಕುಮಾರ್ ಅವರನ್ನು ಕೇಳಿದ್ದಾರೆ. ಈ ವೇಳೆ ಅವರು ಗುರುತಿನ ಚೀಟಿಯನ್ನು ನಿರಾಕರಿಸಿದನು. ಇದರಿಂದ ಇಬ್ಬರು ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಕುಮಾರ್ ರೈಲಿನಲ್ಲಿದ್ದ ಬೆಂಕಿ ನಂದಿಸುವ ಸಾಧನದಿಂದ ಟಿಟಿಇ ತಲೆಗೆ ಹೊಡೆದ ಪರಿಣಾಮ ಅವರಿಗೆ ಪೆಟ್ಟಾಗಿದೆ. ಅಷ್ಟೇ ಅಲ್ಲದೇ ಈ ಸಮಯದಲ್ಲಿ ಟಿಟಿಇ ಅವರ ಚಿನ್ನದ ಸರ ಮತ್ತು ಮೊಬೈಲ್ ಫೋನ್ ಅನ್ನು ದೋಚಿದ್ದಾರೆ. ಈ ಬಗ್ಗೆ ಗುಂತಕಲ್ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಟಿಟಿಇ ದಾಖಲಿಸಿದ ಎಫ್ಐಆರ್ ಪ್ರತಿಯನ್ನು ಉಲ್ಲೇಖಿಸಿ ಘಟನೆಯ ವಿವರವನ್ನು ಮೂಲಗಳು ತಿಳಿಸಿವೆ.
ರೈಲು ಗುಂತಕಲ್ ರೈಲು ನಿಲ್ದಾಣಕ್ಕೆ ಬಂದಾಗ ಮೆಕ್ಯಾನಿಕ್ ಕುಮಾರ್ ಅನ್ನು ಕೆಳಗಿಳಿಸಲಾಯಿತು. ಸೆಕ್ಷನ್ 384 (ಸುಲಿಗೆ), 353 (ಸಾರ್ವಜನಿಕ ಸೇವಕನನ್ನು ಕರ್ತವ್ಯ ನಿರ್ವಹಣೆಯಿಂದ ತಡೆಯಲು ಹಲ್ಲೆ) 506 (ಅಪರಾಧ ಬೆದರಿಕೆ) ಮತ್ತು 332 (ಸ್ವಯಂಪ್ರೇರಿತವಾಗಿ ಸಾರ್ವಜನಿಕ ನೌಕರನಿಗೆ ನೋವುಂಟುಮಾಡುವುದು), 324 (ಉಂಟುಮಾಡುವಿಕೆ) ಅಡಿಯಲ್ಲಿ ಕುಮಾರ್ ವಿರುದ್ಧ ಟಿಟಿಇಯಿಂದ ಎಫ್ಐಆರ್ ದಾಖಲಿಸಲಾಗಿದ್ದು, ಮಂಗಳವಾರ ಸಂಜೆಯ ವೇಳೆಗೆ ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada