ತೆಲುಗಿನ ‘ಅರ್ಜುನ್ ರೆಡ್ಡಿ‘ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಹೊಸ ಪ್ಯಾನ್ ಇಂಡಿಯಾ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗುತ್ತಿರುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಕೊಡಗಿನ ಬೆಡುಗಿ ರಶ್ಮಿಕಾ ಹಲವು ಹಿಂದಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಅವರ ‘ಮಿಷನ್ ಮಜ್ನು‘ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ‘ಪುಷ್ಪ: ದಿ ರೈಸ್‘ ಚಿತ್ರದ ಹಿಂದಿ ಅವತರಣಿಕೆ ಉತ್ತರ ಭಾರತದಲ್ಲಿ ದೊಡ್ಡ ಯಶಸ್ಸನ್ನು ಕಂಡಿರುವ ಹಿನ್ನೆಲೆಯಲ್ಲಿ ರಶ್ಮಿಕಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎಂದು ಬಾಲಿವುಡ್ನ ‘ಪಿಂಕ್ವಿಲ್ಲಾ‘ ವೆಬ್ಸೈಟ್ ವರದಿ ಮಾಡಿದೆ. ಸಂದೀಪ್ ರೆಡ್ಡಿ ನಿರ್ದೇಶನ ಮಾಡುತ್ತಿರುವ ‘ಅನಿಮಲ್’ ಚಿತ್ರಕ್ಕೆ ರಣಬೀರ್ ಕಪೂರ್ ನಾಯಕರಾಗಿದ್ದಾರೆ. ನಾಯಕಿ ಪಾತ್ರಕ್ಕೆ ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದ ಪರಿಣಿತಿ ಚೋಪ್ರಾ ಚಿತ್ರದಿಂದ ಹೊರ ನಡೆದಿದಿದ್ದು ರಶ್ಮಿಕಾ ಆಯ್ಕೆ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಪ್ರಕಟಿಸಬೇಕಿದೆ. ರಶ್ಮಿಕಾ ಈ ಚಿತ್ರದಲ್ಲಿ ರಣಬೀರ್ ಕಪೂರ್ ಪತ್ನಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ. ಬೇಸಿಗೆಯ ನಂತರ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ವರದಿಯಾಗಿದೆ. ರಣಬೀರ್ ಕಪೂರ್ ನಾಯಕರಾಗಲಿರುವ ಪ್ಯಾನ್ ಇಂಡಿಯಾ ‘ಅನಿಮಲ್‘ ಚಿತ್ರವನ್ನು ಸಂದೀಪ್ ರೆಡ್ಡಿ ಬಹಳ ದಿನಗಳ ಹಿಂದೆಯೇ ಘೋಷಣೆ ಮಾಡಿದ್ದರು. ಕೋವಿಡ್ ಕಾರಣ ಹಾಗೂ ನಾಯಕಿ ಬದಲಾವಣೆಯಿಂದ ಸಿನಿಮಾ ಟೇಕಾಪ್ ಆಗಿರಲಿಲ್ಲ. ಖ್ಯಾತ ನಿರ್ಮಾಪಕ ಭೂಷಣ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಭಿನ್ನವಾದ ಕತೆ ಇದಾಗಿದ್ದು, ಅರ್ಜುನ್ ರೆಡ್ಡಿ ಮಾದರಿಯಲ್ಲಿ ಚಿತ್ರ ಇರುವುದಿಲ್ಲ ಎಂದು ನಿರ್ದೇಶಕ ಸಂದೀಪ್ ಈ ಹಿಂದೆ ಹೇಳಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada