ಹಲವು ವರ್ಷಗಳಿಂದ ಕಿರುತೆರೆ ಹಾಗು ಹಿರಿತೆರೆಯ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ ನಂದಿತ ಯಾದವ್ ಪುತ್ರ ಸುಮುಖ.
ಸುಮುಖ, “ಫಿಸಿಕ್ಸ್ ಟೀಚರ್” ಎಂಬ ವಿಭಿನ್ನ ಕಥೆಯ ಚಿತ್ರವನ್ನು ನಿರ್ದೇಶಿಸಿದ್ದಾರೆ ಹಾಗೂ ನಟನೆಯನ್ನು ಮಾಡಿದ್ದಾರೆ.
ಈ ಚಿತ್ರ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಿ ಜನಮನಸೂರೆಗೊಂಡಿದೆ.
ಚಿತ್ರ ನೋಡಿ ಸಂತಸಪಟ್ಟಿರುವ ಗಣ್ಯರು ತಮ್ಮ ಮಾತುಗಳ ಮೂಲಕ ಅಭಿಪ್ರಾಯ ಹಂಚಿಕೊಂಡು, ಸುಮುಖ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ನಾನು ಸುಮುಖನನ್ನು ಬಾಲ್ಯದಿಂದಲೂ ಬಲ್ಲೆ. ಆತ ಒಂದು ಚಿತ್ರ ಮಾಡುತ್ತಿದ್ದೇನೆ ಅಂದಾಗ ಸಂತೋಷಪಟ್ಟವರಲ್ಲಿ ನಾನು ಒಬ್ಬ.
ಈ ಬಾರಿಯ ಚಿತ್ರೋತ್ಸವದಲ್ಲಿ ನಾನು ಈ ಚಿತ್ರ ನೋಡಿದೆ. ಭ್ರಮೆ ಹಾಗೂ ವಾಸ್ತವಗಳ ಸಂಘರ್ಷವನ್ನು ಚಿತ್ರದುದ್ದಕ್ಕೂ ಕಟ್ಟಿಕೊಟ್ಟಿರುವ ರೀತಿ ಅದ್ಭುತ. ಸುಮುಖನಿಗೆ ಒಳ್ಳೆಯ ಭವಿಷ್ಯವಿದೆ ಎಂದು ಬಿ.ಸುರೇಶ್ ಹಾರೈಸಿದ್ದಾರೆ.
ಈ ಸಿನಿಮಾ ನೋಡಿದಾಗ ನನಗೆ ಆಶ್ಚರ್ಯವಾಯಿತು. ಮೊದಲು ವಿಜ್ಞಾನದ ಬಗ್ಗೆ ಹೇಳುತ್ತಿದ್ದಾನೆ ಅಂದುಕೊಂಡೆ. ನಂತರ ಹಾರಾರ್ ಅನಿಸಿತು. ಕ್ಲೈಮ್ಯಾಕ್ಸ್ ನಲ್ಲಿ ಬೇರೆಯೇ ಇತ್ತು. ಸುಮುಖನಿಂದ ಇನ್ನಷ್ಟು ಉತ್ತಮ ಚಿತ್ರಗಳು ಮೂಡಿಬರಲಿ ಎಂದರು ಗಿರಿಜಾ ಲೋಕೇಶ್.
ನಾನು ಈ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದನ್ನು ಹೊರತುಪಡಿಸಿ ಮಾತನಾಡುತ್ತೇನೆ. ನನಗೆ ವಿಶಿಷ್ಟ ಅನಿಸಿದು, ಸುಮುಖ ಎನ್ನುವ ಹೊಸ ಹುಡುಗ ಚಿತ್ರ ಮಾಧ್ಯಮವನ್ನು ಅಭ್ಯಾಸ ಮಾಡಲು ಹೊರಟ್ಟಿದ್ದಾನೆ. ಪರಿಣಾಮಕಾರಿಯಾದಂತಹ, ಆಪ್ತಭಾವವನ್ನು ಸೃಷ್ಟಿಸಬಲ್ಲಂತ ಹಾಗೂ ಗಾಢತೆಯನ್ನು ತಂದುಕೊಡುವಂತಹ ಚಿತ್ರ ನಿರ್ದೇಶಿಸಿದ್ದಾನೆ. ಸಿನಿಮಾ ಆರಂಭದಿಂದ ಅಂತ್ಯದವರೆಗೆ ಕುತೂಹಲ ಹುಟ್ಟಿಸಿರಿವುದು ಆತನ ಉತ್ತಮ ನಿರ್ದೇಶನಕ್ಕೆ ಸಾಕ್ಷಿ ಎಂದರು ಮಂಡ್ಯ ರಮೇಶ್.
ಒಂದೆರೆಡು ಪರಿಚಿತ ಮುಖಗಳನ್ನು ಬಿಟ್ಟು ಭಾಗಶಃ ಹೊಸತಂಡ ಸೇರಿ ಮಾಡಿರುವ ಚಿತ್ರ “ಫಿಸಿಕ್ಸ್ ಟೀಚರ್”. ಭೌತಶಾಸ್ತ್ರ ಅಂದರೆ ಒಂದು ಸಿದ್ದಾಂತ. ಇದು ಯಾವಾಗಲೂ ತರ್ಕದ ಜೊತೆ ಕೆಲಸ ಮಾಡುತ್ತಿರುತ್ತದೆ. ಮನಸ್ಸು ಹಾಗೆ ಕೆಲಸ ಮಾಡುತ್ತಿರುತ್ತದಾ? ಎಂಬ ಅಂಶವನ್ನಿಟ್ಟುಕೊಂಡು ಸುಮುಖ ಚಿತ್ರ ಮಾಡಿದ್ದಾನೆ. ಹೊಸತಂಡದ ಈ ಹೊಸ ಪ್ರಯತ್ನಕ್ಕೆ ಒಳಿತಾಗಲಿ ಎಂದರು ಪಿ.ಶೇಷಾದ್ರಿ.
ಒಬ್ಬ ವೈದ್ಯನಾಗಿ ಹಾಗೂ ಒಬ್ಬ ನಟನಾಗಿ “ಫಿಸಿಕ್ಸ್ ಟೀಚರ್” ನನಗೆ ಇಷ್ಟವಾಯಿತು. ಕೊನೆಯವರೆಗೂ ಸತ್ಯಾಸತ್ಯತೆಯನ್ನು ಸುಮುಖ ಹಿಡಿದಿಟ್ಟಿರುವ ಶೈಲಿ ಶ್ಲಾಘನೀಯ ಎನ್ನುತ್ತಾರೆ ಖ್ಯಾತ ವೈದ್ಯ ರಾಜಕುಮಾರ್.
ಸಾಹಿತ್ಯ, ಸಾಂಸ್ಕೃತಿಕ , ಸಿನಿಮಾ ವಿಮರ್ಶಕ ಹಾಗೂ ಪ್ರಾಧ್ಯಾಪಕ ಎನ್ ಮನು ಚಕ್ರವರ್ತಿ ಅವರು ಸಹ “ಫಿಸಿಕ್ಸ್ ಟೀಚರ್” ಕುರಿತು ಮಾತನಾಡಿದ್ದಾರೆ.
ಪಾಸಿಂಗ್ ಶಾಟ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಸುಮುಖ ಹಾಗೂ ಸ್ಕಂಧ ಸುಬ್ರಹ್ಮಣ್ಯ ಕಥೆ ಬರೆದಿದ್ದಾರೆ. ರಘು ಗ್ಯಾರಹಳ್ಳಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮುಖ, ಪ್ರೇರಣ ಕಂಬಂ, ಮಂಡ್ಯ ರಮೇಶ್, ರಾಜೇಶ್ ನಟರಂಗ ಮುಂತಾದವರಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada