ಎಸ್.ಎಸ್.ಎಲ್.ಸಿ ಪರೀಕ್ಷೆ ಇಂದಿನಿಂದ: ಸಮವಸ್ತ್ರ ಕಡ್ಡಾಯ, ಹಿಜಾಬ್‌ಗಿಲ್ಲ ಅವಕಾಶ

ಹಿಜಾಬ್‌ ಹಾಗೂ ಸಮವಸ್ತ್ರಕ್ಕೆ ಸಂಬಂಧಿಸಿದ ಗೊಂದಲಗಳ ನಡುವೆಯೇ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸೋಮವಾರ ರಾಜ್ಯದಾದ್ಯಂತ ಆರಂಭವಾಗಲಿವೆ. ಏ. 11ರವರೆಗೆ ನಡೆಯಲಿರುವ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಎರಡು ವರ್ಷ ಕೋವಿಡ್‌ನಿಂದಾಗಿ ಪರೀಕ್ಷೆಯಲ್ಲಿ ಕೆಲ ಮಾರ್ಪಾಡುಗಳನ್ನುಮಾಡಲಾಗಿತ್ತು. ಈ ಬಾರಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗಳು ನಡೆಯುತ್ತಿದೆ. 8.73 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 4,52,732 ಬಾಲಕರು, 4,21,110 ಬಾಲಕಿಯರು, ನಾಲ್ವರು ತೃತೀಯ ಲಿಂಗಿಗಳು, 4,618 ಪುನರಾವರ್ತಿತ ಅಭ್ಯರ್ಥಿಗಳು, 46,200 ಮಂದಿ ಖಾಸಗಿ ಅಭ್ಯರ್ಥಿಗಳು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ.

‘ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ. ಯಾವುದೇ ಧಾರ್ಮಿಕ ಭಾವನೆ ಪ್ರತಿನಿಧಿಸುವ ವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ’ ಎಂದು ಬಾಗಲಕೋಟೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಸಚಿವ ಬಿ.ಸಿ. ನಾಗೇಶ್‌ ಭಾನುವಾರ ಪುನರುಚ್ಚರಿಸಿದ್ದಾರೆ.

‘ಕರ್ನಾಟಕ ಶಿಕ್ಷಣ ಕಾಯ್ದೆ, ರಾಜ್ಯ ಸರ್ಕಾರದ ಆದೇಶಗಳು, ಸುತ್ತೋಲೆಗಳು ಹಾಗೂ ತರಗತಿಗಳಲ್ಲಿ ಸಮವಸ್ತ್ರ ನಿಯಮಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ ಪ್ರಕಾರ ಸಮವಸ್ತ್ರದಲ್ಲಿ ಮಕ್ಕಳುಪರೀಕ್ಷೆಗೆ ಹಾಜರಾಗಬೇಕು. ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ಅಭ್ಯರ್ಥಿಗಳು ಸಮವಸ್ತ್ರ ಇಲ್ಲದೇ ಸಾಮಾನ್ಯ ದಿರಿಸಿನಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ಮಕ್ಕಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಿಕ್ಷಣ ಇಲಾಖೆ ಆದೇಶಗಳು ಹಾಗೂ ನ್ಯಾಯಾಲಯದ ತೀರ್ಪನ್ನು ಮಕ್ಕಳು ಪಾಲಿಸುವ ಮೂಲಕ ಪರೀಕ್ಷೆ ಬರೆದು ತಮ್ಮ ಶೈಕ್ಷಣಿಕ ಭವಿಷ್ಯದ ಏಳಿಗೆಯ ಕಡೆ ಗಮನ ಹರಿಸುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವಿದೆ’ ಎಂದು ಸಚಿವರು ಹೇಳಿದರು.

‘ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಈಗಾಗಲೇ ಆಯಾ ಶಾಲೆಗಳ ಮುಖ್ಯಸ್ಥರು ಪಾಲಿಸುತ್ತಿದ್ದಾರೆ. ಶಾಲೆಯ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಿ ಬರಬಹುದು. ಪರೀಕ್ಷಾ ಕೊಠಡಿ ಒಳಗೆ ಧರಿಸಲು ಅವಕಾಶವಿಲ್ಲ. ಗೈರುಹಾಜರಾದವರಿಗೆ ಯಾವುದೇ ಕಾರಣಕ್ಕೂ ಮರುಪರೀಕ್ಷೆ ಮಾಡುವುದಿಲ್ಲ. ಬದಲಿಗೆ ಪೂರಕ ಪರೀಕ್ಷೆ ಬರೆಯಬಹುದು’ ಎಂದೂ ಅವರು ಸ್ಪಷ್ಟಪಡಿಸಿದರು.

ಪ್ರತಿ ಬಾರಿಯಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿ ಇರಲಿದೆ ಎಂದರು.

ಆತಂಕ ಪಡುವ ಅಗತ್ಯವಿಲ್ಲ: ಪಠ್ಯಕ್ರಮದಲ್ಲಿರುವ ವಿಷಯವನ್ನು ಬಿಟ್ಟು ಪರೀಕ್ಷೆಯಲ್ಲಿ ಬೇರೆ ಪ್ರಶ್ನೆಗಳು ಬರುವುದಿಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳ ಆಯ್ಕೆಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ‍ಪರ್ಯಾಯ ಪ್ರಶ್ನೆಗಳನ್ನು ತೆಗೆದುಕೊಳ್ಳಬಹುದು’ ಎಂದು ಸಚಿವರು ತಿಳಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯಕ್ಕೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಸಮಯ ನೀಡಲಾಗುತ್ತದೆ.

ಭಯಪಡದೆ ಪರೀಕ್ಷೆ ಬರೆಯಿರಿ: ಬೊಮ್ಮಾಯಿ

ಹುಬ್ಬಳ್ಳಿ: ‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಎದುರಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಹಿಜಾಬ್ ವಿವಾದದ ಕುರಿತು ಈಗಾಗಲೇ ಹೈಕೋರ್ಟ್ ತೀರ್ಪು ನೀಡಿದೆ. ನಂತರವೂ ವಿವಾದಾತ್ಮಕ ಹೇಳಿಕೆ ನೀಡುವ ಅವಶ್ಯಕತೆ ಇಲ್ಲ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಮವಸ್ತ್ರಕ್ಕೆ ವಿನಾಯಿತಿ ನೀಡಿ’

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಮವಸ್ತ್ರಕ್ಕೆ ವಿನಾಯಿತಿ ನೀಡಬೇಕು ಎಂದು ಹಲವು ಪೋಷಕರು, ಶಾಲಾ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಕೋವಿಡ್‌ ಕಾರಣಕ್ಕೆ ಎರಡು ವರ್ಷಗಳಿಂದ ಶಾಲೆಗಳು ಸರಿಯಾಗಿ ನಡೆದಿಲ್ಲ ಮತ್ತು ಮಕ್ಕಳಿಗೂ ಸಮವಸ್ತ್ರ ವಿತರಣೆಯಾಗಿಲ್ಲ. ಜತೆಗೆ, ಈ ಬಾರಿ ಕೆಲವು ಮಕ್ಕಳು ಆನ್‌ಲೈನ್‌ ಮೂಲಕವೇ ತರಗತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಂತಹ ವಿದ್ಯಾರ್ಥಿಗಳ ಬಳಿ ಸಮವಸ್ತ್ರವೇ ಇಲ್ಲ ಎಂದು ತಿಳಿಸಿದ್ದಾರೆ.

‘ಸಮವಸ್ತ್ರಕ್ಕೆ ಸಂಬಂಧಿಸಿ ನ್ಯಾಯಾಲಯದ ತೀರ್ಪು ಪಾಲಿಸಬೇಕು. ಎರಡು ವರ್ಷ ಕೋವಿಡ್‌ ಸಂಕಷ್ಟದಿಂದಾಗಿ ಅನೇಕ ಮಕ್ಕಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ಹೀಗಾಗಿ, ಸಮವಸ್ತ್ರ ನಿಯಮದಿಂದ ವಿನಾಯಿತಿ ನೀಡಬೇಕು. ಧಾರ್ಮಿಕ ಉಡುಪು ಅಲ್ಲದಿರುವ ಸಾಮಾನ್ಯ ಉಡುಪು ಧರಿಸಲು ಅವಕಾಶ ಕಲ್ಪಿಸಬೇಕು’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸೂಚನೆ

* ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

* ವಿದ್ಯಾರ್ಥಿಗಳು, ಕರ್ತವ್ಯನಿರತ ಸಿಬ್ಬಂದಿ ಹೊರತುಪಡಿಸಿ ಪರೀಕ್ಷಾ ಕೇಂದ್ರದ ಬಳಿ ಅನ್ಯರಿಗೆ ಪ್ರವೇಶ ಇಲ್ಲ

* ಕೋವಿಡ್ ಇರುವ, ಸೋಂಕಿನ ಲಕ್ಷಣಗಳಿರುವವರಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಪ್ರತ್ಯೇಕ ಕೊಠಡಿ ವ್ಯವಸ್ಥೆ

*ಪರೀಕ್ಷೆಗೆ ಮುನ್ನ ಮತ್ತು ನಂತರ ಕೇಂದ್ರಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಸೂಚನೆ

*ಪ್ರತಿ ಕೊಠಡಿಯಲ್ಲಿ ಗರಿಷ್ಠ 20 ಮಕ್ಕಳು. ಒಂದು ಡೆಸ್ಕ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ

*ನೀರಿನ ಬಾಟಲಿಗಳನ್ನು ವಿದ್ಯಾರ್ಥಿಗಳೇ ತರಬೇಕು.

*ವಿದ್ಯಾರ್ಥಿಗಳು ಸುರಕ್ಷಿತ ಅಂತರ ಕಾಪಾಡಬೇಕು. ಮಾಸ್ಕ್‌ ಧರಿಸಬೇಕು

Leave a Reply

Your email address will not be published. Required fields are marked *

Next Post

ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು

Mon Mar 28 , 2022
ವಸತಿ ಕಟ್ಟಡದಲ್ಲಿ ಭಾನುವಾರ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿದ ಕಾರಣವಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ, ಥಾಣೆಯ ನೌಪಾದ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದೆ ಎಂದರು. ಇನ್ನೂ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೊರ ತೆಗೆದಿದ್ದು, ಮೃತದೇಹಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದು ಆಕಸ್ಮಿಕ ಸಾವು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: