ಕೆಎನ್ಎನ್ಡಿಜಿಟಲ್ ಡೆಸ್ಕ್ : ಡೆಹ್ರಾಡೂನ್ʼನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ಇಂದು ಪ್ರಮಾಣ ವಚನ ಸ್ವೀಕರಿಸಿದ್ರು. ಉತ್ತರಾಖಂಡ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರು ಡೆಹ್ರಾಡೂನ್ನ ಪರೇಡ್ ಮೈದಾನದಲ್ಲಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಬಿಜೆಪಿಯ ಹಿರಿಯ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.ಧಾಮಿ ಅವರೊಂದಿಗೆ ಎಂಟು ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಸತ್ಪಾಲ್ ಮಹಾರಾಜ್, ಸುಬೋಧ್ ಉನಿಯಾಲ್, ಧನ್ ಸಿಂಗ್ ರಾವತ್, ರೇಖಾ ಆರ್ಯ, ಗಣೇಶ್ ಜೋಶಿ ಅವರು ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಅಂದ್ಹಾಗೆ, ಧಾಮಿ ಸೋಮವಾರ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು, ಇದು ಎರಡನೇ ಬಾರಿಗೆ ರಾಜ್ಯದ ಚುಕ್ಕಾಣಿಯನ್ನ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟಿತು. ತಿರಥ್ ಸಿಂಗ್ ರಾವತ್ ಅವರ ಉತ್ತರಾಧಿಕಾರಿಯಾಗಿ ಕಳೆದ ವರ್ಷ ಜುಲೈ 4 ರಂದು ಧಾಮಿ ಸಿಎಂ ಅಧಿಕಾರ ವಹಿಸಿಕೊಂಡರು. ಧಾಮಿ ಅವರ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜೆಪಿ 70 ಸದಸ್ಯರ ಸದನದಲ್ಲಿ 47 ಸ್ಥಾನಗಳನ್ನು ಗೆಲ್ಲುವ ಮೂಲಕ ಆರಾಮದಾಯಕ ಬಹುಮತವನ್ನ ಗಳಿಸಿತು. ಆದಾಗ್ಯೂ, ಧಾಮಿ ಅವರು 2012 ಮತ್ತು 2017ರ ಚುನಾವಣೆಯಲ್ಲಿ ಗೆದ್ದ ಕ್ಷೇತ್ರವಾದ ಖತಿಮಾದಿಂದ ಸೋತರು.